ADVERTISEMENT

ಅಚ್ಯುತಾನಂದನ್ ಎಫ್‌ಐಆರ್ ರದ್ದು- ಆದೇಶಕ್ಕೆ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ಕೊಚ್ಚಿ (ಪಿಟಿಐ): ಭೂಹಗರಣವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂ ಹಿರಿಯ ನಾಯಕ ವಿ.ಎಸ್. ಅಚ್ಯುತಾನಂದನ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಮಾಡಿ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶ ಹೊರಡಿಸಿದ ಒಂದು ಗಂಟೆಯ ಒಳಗಾಗಿಯೇ ವಿಭಾಗೀಯ ಪೀಠ ಆ ಆದೇಶಕ್ಕೆ ತಡೆಯಾಜ್ಞೆ ನೀಡಿದ ಅಪರೂಪದ ಘಟನೆ ಗುರುವಾರ ನಡೆದಿದೆ.

ನ್ಯಾಯಮೂರ್ತಿ ಎಸ್.ಎಸ್. ಸತೀಶ್ಚಂದ್ರನ್ ಅವರಿದ್ದ ಏಕಸದಸ್ಯ ಪೀಠ ಅಚ್ಯುತಾನಂದನ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿ ಗುರುವಾರ ಆದೇಶ ನೀಡಿತು. ಆದೇಶ ಹೊರಬಿದ್ದ ಕೆಲಹೊತ್ತಿನಲ್ಲಿಯೇ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ವಿಭಾಗೀಯ ಪೀಠದಲ್ಲಿ ಇದನ್ನು ಪ್ರಶ್ನಿಸಿತು. ತಕ್ಷಣ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಮತ್ತು ಎ.ಎಂ. ಶಫೀಕ್ ಅವರು ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿದರು. 

ಅಚ್ಯುತಾನಂದನ್ ಮುಖ್ಯಮಂತ್ರಿಯಾಗಿದ್ದಾಗ ಸಂಬಂಧಿಯೊಬ್ಬರಿಗೆ ಕಾಸರಗೋಡಿನಲ್ಲಿ ಕಾನೂನುಬಾಹಿರವಾಗಿ 2.33 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿದ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಸಂಚು: ಏಕಸದಸ್ಯ ಪೀಠದ ತೀರ್ಪು ತಮ್ಮ ಪರವಾಗಿ ಹೊರಬೀಳುತ್ತಲೇ `ಇದು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರಕ್ಕೆ ಮಾರಕ ಏಟು' ಎಂದು ಅಚ್ಯುತಾನಂದನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.