ADVERTISEMENT

ಅಣ್ಣಾಗೆ ದಿಗ್ವಿಜಯ್ ಇನ್ನೊಂದು ಪತ್ರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಹಿಸ್ಸಾರ್ ಉಪಚುನಾವಣೆ ಸಂದರ್ಭದಲ್ಲಿ ಅಣ್ಣಾ ಹಜಾರೆ ಅವರಿಗೆ ಇನ್ನೊಂದು ಪತ್ರ ಬರೆದಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಅಣ್ಣಾ ಹೋರಾಟಕ್ಕೆ ಆರ್‌ಎಸ್‌ಎಸ್ ಬೆಂಬಲ ನೀಡುತ್ತಿರುವ ವಿಷಯ ಪ್ರಸ್ತಾಪಿಸಿ, `ನಿಮ್ಮ ಸುತ್ತಮುತ್ತ ಇರುವವರು ನಿಮ್ಮನ್ನು ಕತ್ತಲಲ್ಲಿ ಇಟ್ಟಿದ್ದಾರೆ~ ಎಂದು ಎಚ್ಚರಿಸಿದ್ದಾರೆ.

ಆದರೆ ಈ ಪತ್ರಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರೇ ಖುದ್ದಾಗಿ ಅಣ್ಣಾ ಅವರಿಗೆ ಪತ್ರ ಬರೆದಿರುವಾಗ ಮತ್ತೆ ಇಂತಹದ್ದೊಂದು ಪತ್ರ ಬರೆಯಬೇಕಾದ ಅಗತ್ಯ ಇರಲಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಹೇಳಿದ್ದಾರೆ.

`ನೀವು ಬಿಜೆಪಿಯನ್ನು ಯಾಕೆ ತರಾಟೆಗೆ ತೆಗೆದುಕೊಂಡಿಲ್ಲ~ ಎಂದು ಮಂಗಳವಾರವಷ್ಟೇ ದಿಗ್ವಿಜಯ್ ಅಣ್ಣಾ ತಂಡವನ್ನು ಪ್ರಶ್ನಿಸಿದ್ದರು.

ADVERTISEMENT

ಭ್ರಷ್ಟಾಚಾರ ವಿರುದ್ಧದ ಆಂದೋಲನದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಶಿ ಅವರು ಅಣ್ಣಾಗೆ ಬರೆದ ಪತ್ರದ ಬಗ್ಗೆ ಪ್ರಸ್ತಾಪಿಸುತ್ತಾ `ನಿಮಗೆ ಆಪ್ತರಾಗಿರುವ ಜನರು ನಿಮ್ಮಿಂದ ವಸ್ತುಸ್ಥಿತಿಯನ್ನು ಮರೆಮಾಚಿದ್ದಾರೆ. ನೀವು ಈ ಪತ್ರವನ್ನು ಓದದೇ ಇದ್ದರೆ ನಿಜಕ್ಕೂ ಅದು ಅಪಾಯಕಾರಿ~ ಎಂದಿದ್ದಾರೆ.

`ಮಾರ್ಚ್ ತಿಂಗಳಿನಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಲಾಯಿತು. ನೀವು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಆಂದೋಲನಕ್ಕೆ ಆರ್‌ಎಸ್‌ಎಸ್ ಸಂಪೂರ್ಣ ಸಹಕಾರ ನೀಡುತ್ತದೆ~ ಎಂದು ಜೋಶಿ ಅಣ್ಣಾಗೆ ಬರೆದ ಪತ್ರದಲ್ಲಿ ಹೇಳಿದ್ದರು.

`ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿದ್ದಾಗ ನಡೆದ ಭ್ರಷ್ಟಾಚಾರದ ಬಗ್ಗೆ ನೀವು ಸುಮ್ಮನಿರುವುದು ಯಾಕೆ?~ ಎಂದೂ ಸಿಂಗ್ ಅಣ್ಣಾ ತಂಡವನ್ನು ಕೇಳಿದ್ದರು. ಶಾಂತಿ ಭೂಷಣ್ ಇರಲಿ, ಅವರ ಪುತ್ರ ಪ್ರಶಾಂತ್ ಭೂಷಣ್ ಇರಲಿ ಅಥವಾ ಅರವಿಂದ್ ಕೇಜ್ರಿವಾಲ್ ಇರಲಿ, ಇವರೆಲ್ಲ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಇವರು ನಿಮ್ಮ ನಿಷ್ಕಳಂಕ ವ್ಯಕ್ತಿತ್ವದ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು.

ವಿಚಿತ್ರ ವ್ಯಕ್ತಿ- ಬಿಜೆಪಿ ವಾಗ್ದಾಳಿ
ಅಣ್ಣಾ ಹೋರಾಟಕ್ಕೆ ಆರ್‌ಎಸ್‌ಎಸ್ ಬೆಂಬಲ ಇದೆ ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

`ದಿಗ್ವಿಜಯ್ ವಿಚಿತ್ರ ವ್ಯಕ್ತಿ. ಅಸ್ವಸ್ಥ ಮನಸ್ಸಿನವರು ಮಾತ್ರವೇ ಇಂಥ ಮಾತುಗಳನ್ನು ಆಡುತ್ತಾರೆ. ದಿಗ್ವಿಜಯ್ ಆದಷ್ಟು ಬೇಗ ಗುಣಮುಖರಾಗಲಿ~ ಎಂದು ಪಕ್ಷದ ಮುಖಂಡ ಪ್ರಕಾಶ್ ಜಾವಡೇಕರ್ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.