ADVERTISEMENT

ಅಣ್ಣಾ ಉಪವಾಸ ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST
ಲೋಕಪಾಲ ಮಸೂದೆಗೆ ಲೋಕಸಭೆಯಲ್ಲಿ ಬುಧವಾರ ಅಂಗೀಕಾರ ದೊರೆತ ನಂತರ ಮಹಾರಾಷ್ಟ್ರದ ರಾಳೆಗಣಸಿದ್ದಿಯಲ್ಲಿ ಶಾಲಾ ಮಕ್ಕಳು ಹಣ್ಣಿನ ರಸ ಕುಡಿಸಿದ ನಂತರ ಅಣ್ಣಾ ಹಜಾರೆ ಅವರು ಉಪವಾಸ ಅಂತ್ಯಗೊಳಿಸಿದರು 	–ಪಿಟಿಐ ಚಿತ್ರ
ಲೋಕಪಾಲ ಮಸೂದೆಗೆ ಲೋಕಸಭೆಯಲ್ಲಿ ಬುಧವಾರ ಅಂಗೀಕಾರ ದೊರೆತ ನಂತರ ಮಹಾರಾಷ್ಟ್ರದ ರಾಳೆಗಣಸಿದ್ದಿಯಲ್ಲಿ ಶಾಲಾ ಮಕ್ಕಳು ಹಣ್ಣಿನ ರಸ ಕುಡಿಸಿದ ನಂತರ ಅಣ್ಣಾ ಹಜಾರೆ ಅವರು ಉಪವಾಸ ಅಂತ್ಯಗೊಳಿಸಿದರು –ಪಿಟಿಐ ಚಿತ್ರ   

ರಾಳೆಗಣಸಿದ್ದಿ(ಪಿಟಿಐ/ ಐಎಎ­ನ್‌­ಎಸ್‌): ಲೋಕಪಾಲ ಮಸೂದೆಗೆ ಲೋಕ­ಸಭೆಯಲ್ಲಿ ಬುಧವಾರ ಅಂಗೀಕಾರ ದೊರೆಯುತ್ತಿದ್ದಂತೆ ಮಹಾರಾಷ್ಟ್ರದ ರಾಳೆಗಣಸಿದ್ದಿಯಲ್ಲಿ ಸಂಭ್ರಮಾಚರಣೆ ಮನೆ ಮಾಡಿತು.

ಮಸೂದೆ ಅಂಗೀಕಾರಕ್ಕೆ ಒತ್ತಾಯಿಸಿ  9 ದಿನಗಳಿಂದ ಸಾಮಾಜಿಕ ಕಾರ್ಯ­ಕರ್ತ ಅಣ್ಣಾಹಜಾರೆ ನಡೆಸು­ತ್ತಿದ್ದ ಉಪ­ವಾಸ ಅಂತ್ಯಗೊ­ಳಿಸಿದರು.  ಲೋಕಪಾಲ ಜಾರಿಯಾದ ನಂತರ ಹೇಗೆ ಕಾರ್ಯ­ನಿರ್ವ­ಹಿಸಲಿದೆ ಎಂಬುದರ ಮೇಲೆ ಕಣ್ಣಿಡಲು ‘ಕಳಂಕಿತ­ವಲ್ಲದ ಪ್ರಾಮಾ­­­ಣಿಕ’ ಜನರನ್ನು ಒಳ­ಗೊಂಡ ಕಣ್ಗಾವಲು ಸಮಿತಿ ರಚಿಸು­ವು­ದಾಗಿ ಅವರು ಘೋಷಣೆ ಮಾಡಿ­ದ್ದಾರೆ. ಇದ­ರಲ್ಲಿ ನಿವೃತ್ತ ನ್ಯಾಯ­ಮೂರ್ತಿಗಳು, ರಾಜ್ಯದ ಪೊಲೀಸ್‌ ಮುಖ್ಯಸ್ಥರು ಇರುತ್ತಾರೆ.

ಉಪವಾಸ ನಡೆಸುತ್ತಿದ್ದರಿಂದ 76 ವರ್ಷದ ಹಜಾರೆ ಆರೋಗ್ಯದಲ್ಲಿ ಏರುಪೇ­ರಾಗಿದ್ದರೂ ಲೋಕಸಭೆಯಲ್ಲಿ ಲೋಕ­ಪಾಲಕ್ಕೆ ಅಂಗೀಕಾರ ದೊರೆತ ಕೂಡಲೇ ಅವರು ಚೈತನ್ಯದ ಚಿಲುಮೆಯಾದರು. ಅವರ ಮುಖ ದಲ್ಲಿ ಉತ್ಸಾಹ ಚಿಮ್ಮಿತು. ಸಾವಿರಾರು ಅಣ್ಣಾ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಅಣ್ಣಾ ಅಸಮಾಧಾನ: ಲೋಕಪಾಲ ಮಸೂದೆ ಅಂಗೀಕಾರ ವಾಗಲು ಸಹಕರಿಸಿದ ಎಲ್ಲ ಪಕ್ಷದ ಮುಖಂಡರಿಗೆ ಅಣ್ಣಾ ಕೃತಜ್ಞತೆ ಸಲ್ಲಿಸಿದರು. ಆದರೆ  ಲೋಕಪಾಲವನ್ನು ‘ಜೋಕ್‌ಪಾಲ್‌’ ಎಂದು ಟೀಕಿಸಿದ್ದ  ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕ್ಯಾಮೆರಾ ಎದುರು ನಿಲ್ಲುವುದಿಲ್ಲ: ವಿಜಯೋತ್ಸವ ಭಾಷಣ ಆರಂಭಿಸುವು ದಕ್ಕಿಂತಲೂ ಮೊದಲು ಅಣ್ಣಾ ಹಜಾರೆ ಕ್ಯಾಮೆರಾ ಮುಂದೆ ನಿಲ್ಲುವ ಕೆಲವು ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿ­ಸಿದರು. ಕೇಜ್ರಿವಾಲ್‌ ಹಾಗೂ ಅವರ ಬೆಂಬಲಿಗರ ಬಗ್ಗೆ ಕೋಪ ವ್ಯಕ್ತ­ಪಡಿ­ಸಿದರು.

‘ಕ್ಯಾಮೆರಾಕ್ಕೆ ಪೋಸು ನೀಡುವ ನಾಯಕರಿಂದ ದೇಶಕ್ಕೆ ಲಾಭ­ವಿಲ್ಲ. ನಾನು ಹಾಗೆ ಮಾಡಿದ್ದರೆ ಇಲ್ಲಿಯ­ವರೆಗೆ ಬರುತ್ತಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.