ADVERTISEMENT

ಅಣ್ಣಾ ತಂಡ ಹೊಸ ತಂತ್ರ; ಕಾರ್ಡ್ ಆಂದೋಲನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

 ಮುಂಬೈ (ಪಿಟಿಐ): ಭ್ರಷ್ಟಾಚಾರ ವಿರೋಧಿ ಚಳವಳಿ ಸಂಘಟನೆಯ ಕಾರ್ಯಕರ್ತರು ವರ್ಷಪೂರ್ತಿ ನಡೆಸುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಸಲುವಾಗಿ ಅಣ್ಣಾ ಹಜಾರೆ ತಂಡದ ಸದಸ್ಯರು `ಅಣ್ಣಾ ಎಸ್‌ಎಂಎಸ್ ಕಾರ್ಡ್~ ಎಂಬ ಆಂದೋಲವನ್ನು ಆರಂಭಿಸಿದ್ದಾರೆ.

ಈ ಮೂಲಕ ಸಾರ್ವಜನಿಕರಿಗೆ ತಮ್ಮ ಸಂಘಟನೆ ನಡೆಸುವ ಚಳುವಳಿಗಳ ಕುರಿತು ಪ್ರತಿದಿನ ಮಾಹಿತಿ ನೀಡಲು ಅಣ್ಣಾ ತಂಡದ ಸದಸ್ಯರು ಮುಂದಾಗಿದ್ದಾರೆ.

`ನಾವು ಒಂದು ಕೋಟಿ ಕಾರ್ಡ್‌ಗಳನ್ನು ಸಂಗ್ರಹಿಸಿದ್ದೇವೆ. ಪ್ರತಿ ಕಾರ್ಡ್ ಬೆಲೆ ರೂ 20. `ಭಷ್ಟಾಚಾರ ವಿರುದ್ಧದ ಭಾರತ ಚಳವಳಿ~ ಕಾರ್ಯಕರ್ತರು ಈ ಕಾರ್ಡ್‌ನ್ನು ಜನರಿಗೆ ತಲುಪಿಸುತ್ತಾರೆ~ ಎಂದು ಹಜಾರೆ ಸಹವರ್ತಿ ದತ್ತಾ ಅವಾರಿ ಅವರು ರಾಳೇಗಣ ಸಿದ್ದಿಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಕಾರ್ಡ್ ಹೊಂದಿರುವವರಿಗೆ ಪ್ರತಿದಿನ `ಭ್ರಷ್ಟಾಚಾರ ವಿರೋಧಿ ಚಳವಳಿ ಸಂಘಟನೆ~ಯಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ~ ಎಂದು ಅವರು ವಿವರಿಸಿದರು.

`ಕಾರ್ಡ್ ಪಡೆದವರು ಅದರೊಳಗಿರುವ ಕ್ರಮ ಸಂಖ್ಯೆಯನ್ನು 9223334545ಗೆ ಎಸ್‌ಎಂಎಸ್ ಮಾಡಬೇಕು. ಆಗ ಅವರ ಹೆಸರು ನೋಂದಣಿಯಾಗುತ್ತದೆ. ನೋಂದಾಯಿತ ವ್ಯಕ್ತಿಗಳಿಗೆ ಅಣ್ಣಾ ಚಳವಳಿ ವರ್ಷಪೂರ್ತಿ ನಡೆಸುವ ಕಾರ್ಯಕ್ರಮಗಳ ವಿವರವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಳುಹಿಸಲಾಗುತ್ತದೆ~ ಎಂದು ಅವರು ಮಾಹಿತಿ ನೀಡಿದರು.
 
`ಪ್ರಸ್ತುತ ಕಾರ್ಡ್‌ಗಳನ್ನು ದೆಹಲಿ ಮತ್ತು ಚೆನ್ನೈಗೆ ಕಳುಹಿಸಲಾಗಿದೆ. ಅಲ್ಲಿಂದ ದೇಶದ ವಿವಿಧ ರಾಜ್ಯಗಳಿಗೆ ವಿತರಿಸಲಾಗುತ್ತದೆ. ಈ ಕಾರ್ಡ್ ಮಾರಾಟ ಅಥವಾ ವಿತರಣೆಯಿಂದ ನಾವು ಯಾವುದೇ ಲಾಭ ಗಳಿಸುತ್ತಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.