ADVERTISEMENT

ಅಣ್ಣಾ ಭೇಟಿ ಮಾಡಿದ ಎಂಪಿಸಿಸಿ ಅಧ್ಯಕ್ಷ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ): ಅತ್ತ ಅಣ್ಣಾ ತಂಡದ ಸದಸ್ಯರು ಪ್ರಚಾರ ಆರಂಭಿಸುತ್ತಿದ್ದಂತೆಯೇ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಾಣಿಕ್‌ರಾವ್ ಠಾಕ್ರೆ ಅವರು ರಾಳೆಗಣ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸುಮಾರು ಇಪ್ಪತ್ತು ನಿಮಿಷಗಳ ಕಾಲ ಹಜಾರೆ ಅವರೊಂದಿಗೆ ಚರ್ಚೆ ನಡೆಸಿದರು. ಜನಲೋಕಪಾಲ ಮಸೂದೆಗೆ ಕಾಂಗ್ರೆಸ್ ವಿರೋಧಿಸುತ್ತಿರುವುದರಿಂದ ಆ ಪಕ್ಷಕ್ಕೆ ಮತ ಹಾಕದಂತೆ ಪ್ರಚಾರ ಮಾಡಲಾಗುತ್ತಿದೆ ಎಂದು ಅಣ್ಣಾ ಈ ಸಂದರ್ಭದಲ್ಲಿ ತಿಳಿಸಿದರು.

ಲೋಕಪಾಲ ಮಸೂದೆಗೆ ಸರ್ಕಾರ ಬದ್ಧ (ನವದೆಹಲಿ ವರದಿ): ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ರೂಪಿಸಲು ಸಂಸತ್ತೇ ಪರಮಾಧಿಕಾರ ಹೊಂದಿದೆ ಎಂದಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಭ್ರಷ್ಟಾಚಾರ ನಿಯಂತ್ರಿಸುವ ಸಲುವಾಗಿ ಉದ್ದೇಶಿತ  ಲೋಕಪಾಲ ಮಸೂದೆ ಜಾರಿಗೆ ತರಲು ಸರ್ಕಾರ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಸ್ವಿಟ್ಜರ್‌ಲೆಂಡ್ ಮತ್ತು ಆಸ್ಟ್ರೀಯಾ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ವಿಮಾನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಮಸೂದೆ ಜಾರಿಗೆ ತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

`ರಾಜಕೀಯ ಬೇಡ: ಅಣ್ಣಾಗೆ ಕಿವಿಮಾತು~
ನಾಗಪುರ (ಐಎಎನ್‌ಎಸ್):
`ರಾಜಕೀಯವನ್ನು ರಾಜಕಾರಣಿಗಳಿಗೆ ಬಿಟ್ಟು ಬಿಡಿ~ ಎಂದು ಅಣ್ಣಾ ಹಜಾರೆ ಅವರಿಗೆ ಕಾನೂನು ಸಚಿವ ಸಲ್ಮಾನ್ ಖುರ್ಷಿದ್  ಕಿವಿ ಮಾತು ಹೇಳಿದ್ದಾರೆ.

ಹಾಗೆಯೇ ರಾಷ್ಟ್ರೀಯ ಸಲಹಾ ಮಂಡಳಿ (ಎನ್‌ಎಸಿ)ಯ ಸಂವಿಧಾನಾತ್ಮಕತೆಯ ಬಗ್ಗೆ ಪ್ರಶ್ನಿಸುವ ಹಕ್ಕು ಆರ್‌ಎಸ್‌ಎಸ್‌ಗೆ ಇಲ್ಲ ಎಂದೂ ಅವರು ಹೇಳಿದ್ದಾರೆ. ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಮತ ಹಾಕಿ ಎನ್ನುವ ಆಂದೋಲನಕ್ಕೆ ಕರೆ ನೀಡಿರುವ ಅಣ್ಣಾ ಹಜಾರೆ ವಿರುದ್ಧವೂ ಅವರು ಕಿಡಿ ಕಾರಿದರು. ರಾಜಕಾರಣಿಗಳು ರಾಜಕೀಯ ಮಾಡುತ್ತಾರೆ. ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಮ್ಮ ಕೆಲಸ ನಿರ್ವಹಿಸಲಿ ಎಂದು ಸಲಹೆ ಮಾಡಿದರು.

`ಕಾಂಗ್ರೆಸ್‌ಗೆ ಹಿನ್ನಡೆಯಾಗದು~
(ಹಿಸ್ಸಾರ್ ವರದಿ):
ಜನಲೋಕಪಾಲ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪರ ಮತ ಚಲಾಯಿಸದಂತೆ ಅಣ್ಣಾ ಹಜಾರೆ ತಂಡದ ಕಾರ್ಯಕರ್ತರು ನಡೆಸುತ್ತಿರುವ ಪ್ರಚಾರದಿಂದ ತಮ್ಮ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ ಎಂದು ಹರಿಯಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಫೂಲ್‌ಚಂದ್ ಮುಲ್ಲಾನ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.