ADVERTISEMENT

ಅಣ್ಣಾ-ರಾಮದೇವ್ ಜಂಟಿ ಉಪವಾಸ ಆರಂಭ

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 6:30 IST
Last Updated 3 ಜೂನ್ 2012, 6:30 IST

ನವದೆಹಲಿ (ಪಿಟಿಐ): ಕಪ್ಪುಹಣ ಮತ್ತು ಭ್ರಷ್ಟಾಚಾರ ವಿರೋಧಿಸಿ ಸಾಮಾಜಿಕ ಕಾರ್ಯಕರ್ತ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹಾಗೂ ಯೋಗ ಗುರು ಬಾಬಾ ರಾಮದೇವ್ ಅವರು ಭಾನುವಾರ ಜಂತರ್ ಮಂತರ್‌ನಲ್ಲಿ ಜಂಟಿಯಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಪ್ರತಿಭಟನೆಗೂ ಮುನ್ನ ಅಣ್ಣಾ ಹಾಗೂ ರಾಮದೇವ್ ಅವರು ರಾಜ್‌ಘಾಟ್‌ನಲ್ಲಿರುವ ಮಹಾತ್ಮಾಗಾಂಧಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಿದರು. ನಂತರ ಬೇರೆ ಬೇರೆ ಮಾರ್ಗಗಳ ಮೂಲಕ ಸಂಚರಿಸಿ ಜಂತರ್ ಮಂತರ್‌ನಲ್ಲಿ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಬೆಳಿಗ್ಗೆ 10.10ರ ಸುಮಾರಿಗೆ ಬಂದು ತಲುಪಿದರು.
 
ಸತ್ಯಾಗ್ರಹಕ್ಕೂ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ರಾಮದೇವ್ ಅವರು `ವಿದೇಶದಲ್ಲಿರುವ ಕಪ್ಪುಹಣವನ್ನು ಪುನಃ ದೇಶಕ್ಕೆ ತರಿಸಬೇಕೆಂಬ ಉದ್ದೇಶದಿಂದ ನಾವು ಈ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಇಂತಹ ಉದಾತ್ತ ಹೋರಾಟದಲ್ಲಿ ದೇಶದ ನಾಗರಿಕರೆಲ್ಲರೂ ಭಾಗವಹಿಸಬೇಕು~ ಎಂದು ಹೇಳಿದರು.
 
ನಂತರ ಮಾತನಾಡಿದ ಅಣ್ಣಾ ಅವರು `ಭವಿಷ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ನಡೆಯುವ ಹೋರಾಟಗಳ ಸ್ವರೂಪ ಹಾಗೂ ಕಾರ್ಯತಂತ್ರ ಕುರಿತು ನಾವು ಮಾತನಾಡುತ್ತೇವೆ~ ಎಂದರು. 

ಸತ್ಯಾಗ್ರಹದ ವೇಳೆ ರಾಮದೇವ್ ಅವರೊಂದಿಗೆ ಅವರ ಆಪ್ತ ಬಾಲಕೃಷ್ಣನ್ ಮತ್ತು ಅಣ್ಣಾ ಅವರೊಂದಿಗೆ ತಂಡದ ಸದಸ್ಯರಾದ ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಹಾಜರಿದ್ದರು.

ಕಳೆದ ಒಂದು ವರ್ಷದಿಂದ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳದ ಅಣ್ಣಾ ಹಾಗೂ ರಾಮದೇವ್ ಅವರು ಶನಿವಾರವಷ್ಟೇ ಒಟ್ಟಾಗಿ ಕಾಣಿಸಿಕೊಂಡು ಸತ್ಯಾಗ್ರಹ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.