ADVERTISEMENT

ಅತ್ಯಾಚಾರದ ವಿರುದ್ಧ ಹೊಸ ಕಾನೂನು ಸುಳ್ಳು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ಅತ್ಯಾಚಾರದ ವಿರುದ್ಧ ಹೊಸ ಕಾನೂನು ಸುಳ್ಳು
ಅತ್ಯಾಚಾರದ ವಿರುದ್ಧ ಹೊಸ ಕಾನೂನು ಸುಳ್ಳು   

ಮುಂಬೈ: ಕಳೆದ ವಾರದಲ್ಲಿ ಕಠುವಾ ಮತ್ತು ಉನ್ನಾವೊ ಅತ್ಯಾಚಾರ ಪ್ರಕರಣಗಳ ನಂತರ ವಾಟ್ಸಪ್‌ನಲ್ಲಿ ಅತಿ ಹೆಚ್ಚು ಹರಿದಾಡಿದ ಸಂದೇಶ, ‘ಮೋದಿ ಸರ್ಕಾರವು ಸೆಕ್ಷನ್ 233ರ ಅಡಿಯಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಅತ್ಯಾಚಾರಿಯ ಹತ್ಯೆ ಮಾಡುವ ಹಕ್ಕು ನೀಡಿದೆ’. ಈ ಸಂದೇಶ ಅಪಾಯಕಾರಿ ಸನ್ನಿವೇಶದಲ್ಲಿದ್ದರೆ ಮಹಿಳೆಯು ಏನು ಮಾಡಬೇಕು ಎಂಬ ಸಲಹೆಗಳನ್ನೂ ಒಳಗೊಂಡಿತ್ತು.

ಇದೊಂದು ಸುಳ್ಳು ಸುದ್ದಿ. ಮೊದಲ ಸತ್ಯವೆಂದರೆ ಸೆಕ್ಷನ್ 233 ಅತ್ಯಾಚಾರದ ವಿರುದ್ಧದ ಕಾನೂನು ಅಲ್ಲ.

ಒಂದು ವೇಳೆ ಮಹಿಳೆಯು ಅತ್ಯಾಚಾರಿಯನ್ನು ಕೊಂದರೆ ಅದು ಶಿಕ್ಷಾರ್ಹವಲ್ಲ ಎಂದೂ ಭಾರತೀಯ ದಂಡ ಸಂಹಿತೆ 233 ಹೇಳುವುದಿಲ್ಲ. ಅಂಥ ಯಾವ ಕಾನೂನನ್ನೂ ಮೋದಿ ಸರ್ಕಾರ ಪಾಸು ಮಾಡಿಲ್ಲ.

ADVERTISEMENT

ಇದೊಂದು ಗಾಳಿ ಸುದ್ದಿ ಎನ್ನಲು ಇಲ್ಲಿವೆ ಒಂದಷ್ಟು ಕಾರಣಗಳು.
ಜ.29ರಿಂದ ಏಪ್ರಿಲ್‌ 6ರವರೆಗೆ ಅಧಿವೇಶನ ನಡೆದವು. ಈ ಅಧಿವೇಶನದಲ್ಲಿ ಇಂಥ ಯಾವುದೇ ಮಸೂದೆಯನ್ನು ಅಂಗೀಕರಿಸಿಲ್ಲ. ಹೊಸತು ಮತ್ತು ಬಾಕಿ ಇರುವ ಒಟ್ಟು72 ಮಸೂದೆಗಳು ಚರ್ಚೆಯಾಗಬೇಕಿದ್ದವು. ಇವುಗಳಲ್ಲಿ ನಾಲ್ಕು ಮಾತ್ರ ಅಂಗೀಕಾರವಾದವು. ಅವುಗಳಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಯಾವುದೇ ಮಸೂದೆ ಇರಲಿಲ್ಲ.

ಭಾರತೀಯ ದಂಡಸಂಹಿತೆಯ ಪ್ರಕಾರ ಸೆಕ್ಷನ್ 233 ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳಿಗೆ ಸಮೀಪದ ಸಂಬಂಧವನ್ನೂ ಹೊಂದಿಲ್ಲ. ಇದು ನಕಲಿ ನಾಣ್ಯಗಳು ಅಥವಾ ನಾಣ್ಯಗಳ ಅಪಮೌಲ್ಯಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗಿದೆ. ಇದಕ್ಕೆ ಮೂರು ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಭಾರತದ ಯಾವುದೇ ಕಾನೂನು ಸಹ ಅತ್ಯಾಚಾರಿಯನ್ನು ಕೊಲ್ಲುವ ಹಕ್ಕನ್ನು ಸಂತ್ರಸ್ತೆಗೆ ನೀಡಿಲ್ಲ. ಆದರೆ ಸ್ವರಕ್ಷಣೆಗೆಂದು ಕೆಲವು ಸನ್ನಿವೇಶಗಳಲ್ಲಿ ಇದನ್ನು ಸಮರ್ಥಿಸಬಹುದಾಗಿದೆ. ಆತ್ಮರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ಸೆಕ್ಷನ್‌ 96–106ರವರೆಗೆ ಇವೆ. ಇದು ಆತ್ಮರಕ್ಷಣೆಯ ಹಕ್ಕನ್ನು ವ್ಯಾಖ್ಯಾನಿಸುತ್ತದೆ. ಆದರೆ ಎಲ್ಲಿಯೂ ಹತ್ಯೆಯನ್ನು ಸಮರ್ಥಿಸುವುದಿಲ್ಲ.

ಒಂದು ವೇಳೆ ವ್ಯಕ್ತಿಯ ಅಪಹರಣ, ಅತ್ಯಾಚಾರ, ಅಸಮ್ಮತಿಯ ಸಂಭೋಗಗಳಂಥ ಸಂದರ್ಭದಲ್ಲಿ ಸಂತ್ರಸ್ತರು ಪ್ರತಿ ಹಲ್ಲೆ ಮಾಡಿದಾಗ ಆ ವ್ಯಕ್ತಿ ಸತ್ತು ಹೋದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗದು ಎಂದು  ಸೆಕ್ಷನ್‌ 100 ಹೇಳುತ್ತದೆ.

ಕಾನೂನು ಆತ್ಮರಕ್ಷಣೆಯ ಪ್ರಯತ್ನವನ್ನು ಗುರುತಿಸುತ್ತದೆ. ಪ್ರಾಣಾಂತಿಕ ಸಂದರ್ಭಗಳಲ್ಲಿ ವೈಯಕ್ತಿಕ ಸುರಕ್ಷೆಯನ್ನು ಎತ್ತಿ ಹಿಡಿಯುತ್ತದೆ. ಆದರೆ ಇದು ಕೇವಲ ಅತ್ಯಾಚಾರ ಸಂತ್ರಸ್ತೆಗೆ ನೀಡಿರುವ ಸವಲತ್ತು ಅಲ್ಲ.

(ಈ ಸಾಲಿನ ಅಧಿವೇಶನದಲ್ಲಿ ಪಾಸಾದ ಮಸೂದೆಗಳ ಮಾಹಿತಿ ಮತ್ತು ಪಟ್ಟಿಗಾಗಿ, ಈ ಸುದ್ದಿಯ ಇನ್ನಷ್ಟು ವಿವರಗಳಿಗಾಗಿ https://www.boomlive.in/did-modi-govt-pass-a-law-which-gives-a-victim-the-right-to-kill-the-rapist/ ಕ್ಲಿಕ್‌ ಮಾಡಿ)

* ಸ್ನೇಹಾ ಅಲೆಕ್ಸಾಂಡರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.