ADVERTISEMENT

ಅಧಿಕಾರ ತ್ಯಜಿಸಿ, ಚುನಾವಣೆ ಎದುರಿಸಿ - ಕೇಂದ್ರಕ್ಕೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 9:20 IST
Last Updated 22 ಆಗಸ್ಟ್ 2012, 9:20 IST

ನವದೆಹಲಿ (ಪಿಟಿಐ): ಸಂಸತ್‌ನಲ್ಲಿ ಸಿಎಜಿ ವರದಿ ಎಬ್ಬಿಸಿರುವ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಅವ್ಯವಹಾರದ ಗದ್ದಲ ಎರಡನೇಯ ದಿನವು ಮುಂದುವರಿದು ಉಭಯ ಸದನಗಳ ಕಲಾಪಗಳನ್ನು ಬಲಿ ತೆಗೆದುಕೊಂಡಿದ್ದು, ಬಿಜೆಪಿ ಕೂಡಲೇ ಸರ್ಕಾರ ವಜಾಗೊಂಡು, ದೇಶದಲ್ಲಿ ಹೊಸ ಚುನಾವಣೆ ನಡೆಯಲಿ ಎಂದು ಬುಧವಾರ  ಆಗ್ರಹಿಸಿದೆ.

ಸಂಸತ್ತಿನ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಅವರು `ದೇಶದ ಸಂಪತ್ತನ್ನು ಲೂಟಿ ಹೊಡೆಯಲು ನಾವು ಅವಕಾಶ ನೀಡುವುದಿಲ್ಲ. ಈ ಸರ್ಕಾರ ಹೋಗಲೇ ಬೇಕು ಮತ್ತು ದೇಶದಲ್ಲಿ ಹೊಸ ಚುನಾವಣೆ ನಡೆಯಬೇಕು~ ಎಂದು ಹೇಳಿದರು.
 
ಸಂಸತ್ತಿನಲ್ಲಿ ಬಿಜೆಪಿ ಯಾಕೆ ಸಿಎಜಿ ವರದಿ ಕುರಿತಂತೆ ಚರ್ಚೆ ನಡೆಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರಕಾಶ್ ಅವರು `ಇದು ಕಾಂಗ್ರೆಸ್‌ನ ಹಾದಿ ತಪ್ಪಿಸುವ ತಂತ್ರ. ಕಾಂಗ್ರೆಸ್ ಪಿಎಸಿ ಮತ್ತು ಯಾವುದೇ ಸಂವಿಧಾನಿಕ ವ್ಯವಸ್ಥೆ ಕುರಿತಂತೆ ಯಾವುದೇ ಗೌರವ ಹೊಂದಿಲ್ಲ. ಪಿಎಸಿ ವರದಿ ಎನ್ನುವುದು ಅವರಿಗೆ ಪಲಾಯನದ ಒಂದು ಮಾರ್ಗವಷ್ಟೇ. ಹೀಗಾಗಿ ನಾವು ಅವರ ವಾದವನ್ನು ಒಪ್ಪುವುದಿಲ್ಲ~ ಎಂದು ತಿಳಿಸಿದರು.
 
`ಕಾಂಗ್ರೆಸ್ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಹೀಗಾಗಿ ನಾವು ಅದಕ್ಕೆ ಲೂಟಿ ಮಾಡಲು ಬಿಡುವುದಿಲ್ಲ. ನಮ್ಮ ಹೋರಾಟ ಸಂಘಟಿತ ಲೂಟಿಯ ವಿರುದ್ದವಾಗಿದೆ~ ಎಂದರು.
 
ಹಾಗಾದರೆ, ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿರಾ? ಎಂಬ ಪ್ರಶ್ನೆಗೆ `ನಾವು ಕಲಾಪಕ್ಕೆ ತೊಂದರೆ ಉಂಟುಮಾಡುವುದಿಲ್ಲ. ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುತ್ತಿದೆ ಅಷ್ಟೇ~ ಎಂದು ಪ್ರಕಾಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.