ADVERTISEMENT

ಅಪ್ಪಳಿಸಿತು ‘ಫೈಲಿನ್’ ಚಂಡಮಾರುತ

ಬುಡಮೇಲಾದ ಮರ, ವಿದ್ಯುತ್ ಕಂಬಗಳು, ಎಲ್ಲೆಡೆ ಕಗ್ಗತ್ತಲು, ಜನಜೀವನ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2013, 20:01 IST
Last Updated 12 ಅಕ್ಟೋಬರ್ 2013, 20:01 IST

ಭುವನೇಶ್ವರ (ಪಿಟಿಐ): ಒಡಿಶಾ ಮತ್ತು ಆಂಧ್ರ ಕರಾವಳಿಯ 1.2 ಕೋಟಿ ಜನರನ್ನು ಬೀದಿಪಾಲು ಮಾಡುವ ಭೀತಿ ಹುಟ್ಟಿಸಿದ ವಿನಾಶಕಾರಿ ‘ಫೈಲಿನ್’ ಚಂಡಮಾರುತ ಶನಿವಾರ ರಾತ್ರಿ 9.20ರ ಸುಮಾರಿಗೆ ಗೋಪಾಲಪುರ ಕಡಲ ದಂಡೆಗೆ ಅಪ್ಪಳಿಸಿತು.

ಗಂಟೆಗೆ 200 ಕಿ.ಮೀ. ವೇಗದಲ್ಲಿ ಬುಗುರಿಯಂತೆ ತಿರು­ಗು­ತ್ತಿದ್ದ ಚಂಡಮಾರುತ ಒಡಿಶಾ ಕಡಲ ದಂಡೆಗೆ  ಎರಗು­ತ್ತಿದ್ದಂತೆ ಮರಗಳು, ವಿದ್ಯುತ್‌-ದೂರವಾಣಿ ಕಂಬಗಳು ಬುಡ­ಮೇಲಾದವು. ಬೆಳಿಗ್ಗೆಯಿಂದಲೇ ಸುರಿಯುತ್ತಿದ್ದ ಮಳೆ, ಗಾಳಿ ಇನ್ನಷ್ಟು ಬಿರುಸುಗೊಂಡವು. ಜನ­ಜೀವನ ಮತ್ತು ಎಲ್ಲ ಬಗೆಯ ಸಂಚಾರ ಸ್ತಬ್ಧಗೊಂಡವು. ಹಲವು ಪ್ರದೇಶಗಳು ವಿದ್ಯುತ್‌ ಇಲ್ಲದೆ ಕಗ್ಗತ್ತಲಲ್ಲಿ ಮುಳುಗಿವೆ.

ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಕರಾವಳಿ­ಯುದ್ದಕ್ಕೂ 2000 ಪರಿಹಾರ ಸಿಬ್ಬಂದಿಯನ್ನು ನಿಯೋಜಿ­ಸಲಾಗಿದೆ. ಸೇನಾ ತುಕಡಿಗಳು ಸನ್ನದ್ಧ ಸ್ಥಿತಿಯಲ್ಲಿವೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ಜೀವಹಾನಿ ತಡೆಯುವುದಕ್ಕೆ ಆದ್ಯತೆ ನೀಡಿತ್ತು. ಇದರ ಅಂಗವಾಗಿ ಒಡಿಶಾದ 4.5 ಲಕ್ಷ  ಮತ್ತು ಆಂಧ್ರದ 1.5 ಲಕ್ಷ ಜನರನ್ನು ಈ ಮೊದಲೇ ಸ್ಥಳಾಂತರಿ­ಸಿದ್ದರಿಂದ ಭಾರಿ ಪ್ರಮಾಣದ ಸಾವುನೋವು ತಪ್ಪಿತು. ಆದರೂ, ಮರಗಳು ಮತ್ತು ಮನೆಗಳು ಬಿದ್ದು ಒಡಿಶಾದಲ್ಲಿ 7 ಜನ ಮೃತಪಟ್ಟಿದ್ದಾರೆ.

ರಾಷ್ಟ್ರದಲ್ಲಿ ಪ್ರಕೃತಿ ವಿಕೋಪದ ಕಾರಣಕ್ಕಾಗಿ ಇಷ್ಟು ಭಾರಿ ಸಂಖ್ಯೆಯಲ್ಲಿ ಜನರನು್ನ ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದು  23 ವರ್ಷಗಳ ನಂತರ ಇದೇ ಮೊದಲು ಎನ್ನಲಾಗಿದೆ. 1990ರಲ್ಲೂ ಆಂಧ್ರದ 6 ಲಕ್ಷ ಜನರನ್ನು ಸ್ಥಳಾಂತರಿಸ­ಲಾಗಿತ್ತು.14 ವರ್ಷಗಳ ಹಿಂದೆಯೂ ಇಂಥದೇ ರಕ್ಕಸ ಚಂಡಮಾರುತ ಇದೇ ಭಾಗದಲ್ಲಿ ಅಪ್ಪಳಿಸಿತ್ತು.

ಕೆಲ ವರ್ಷಗಳ ಹಿಂದೆ ಅಮೆರಿಕದ ಕರಾವಳಿಯನ್ನು ಗುಡಿಸಿ ಹಾಕಿದ್ದ ‘ಕತ್ರೀನಾ’ ಮತ್ತು 1999ರಲ್ಲಿ ಆಂಧ್ರ ಕರಾವಳಿಯಲ್ಲಿ 10,000 ಜೀವಗಳನ್ನು ಬಲಿ ತೆಗೆದುಕೊಂಡ ಚಂಡಮಾರುತಗಳಂತೆಯೇ ‘ಫೈಲಿನ್‌’ ಕೂಡ ಅತ್ಯಂತ ವಿನಾಶಕಾರಿಯಾಗಿರಲಿದೆ;  ಇದು ದುರ್ಬಲಗೊಳ್ಳುವ ಮುನ್ನ ಕನಿಷ್ಠ 6 ಗಂಟೆಗಳ ಕಾಲ ರೌದ್ರಾವತಾರದೊಂದಿಗೆ ಫೂತ್ಕರಿಸಲಿದೆ  ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಭಾರಿ ಮಳೆ: ಚಂಡಮಾರುತ ಅಪ್ಪಳಿಸುವ  ಮುನ್ನ ಶುಕ್ರವಾರ ರಾತ್ರಿಯಿಂದಲೂ ಒಡಿಶಾ ಮತ್ತು ಆಂಧ್ರದ 7 ಜಿಲೆ್ಲಗಳಲ್ಲಿ ರಭಸದ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ‘ಫೈಲಿನ್‌’ನಿಂದಾಗಿ ಪಶಿ್ಚಮ ಬಂಗಾಳ, ಜಾರ್ಖಂಡ್‌, ಛತ್ತೀಸಗಡ, ಬಿಹಾರ ಮತ್ತು ಉತ್ತರಪ್ರದೇಶದ ಕೆಲವು ಭಾಗಗಳಲ್ಲೂ ಮಳೆ ಬೀಳುವ ಸಂಭವವಿದೆ.

ರೈಲು, ವಿಮಾನ ರದ್ದು:  ಚಂಡಮಾರುತದ ಕಾರಣ­ದಿಂದಾಗಿ ಹೌರಾ ಹಾಗೂ ವಿಶಾಖಪಟ್ಟಣಂ
ಮಾರ್ಗದಲ್ಲಿ ಸಂಚರಿಸುವ 56 ರೈಲುಗಳ ಸಂಚಾರ ರದ್ದುಪಡಿಸ­ಲಾಗಿತ್ತು. ಭಾನುವಾರವೂ ಇದೇ ಸ್ಥಿತಿ ಮುಂದುವರಿ­ಯುವ ಸೂಚನೆಗಳಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಒಡಿಶಾದ ಭುವನೇಶ್ವರ, ಗೋಪಾಲಪುರ ಮೂಲಕ ಸಾಗುವ ಚೆನ್ನೈ– ಕೋಲ್ಕತ್ತ ರಾಷ್ಟ್ರೀಯ ಹೆದಾ್ದರಿ 5 ರಲ್ಲಿ ಟ್ರಕ್‌ಗಳು ಸೇರಿದಂತೆ ಎಲಾ್ಲ ವಾಹನಗಳು ಮೈಲುಗಟ್ಟಲೆ ಉದ್ದಕ್ಕೆ ಸ್ತಬ್ಧವಾಗಿ ನಿಂತಿವೆ. 500 ಟನ್‌ಗೂ ಹೆಚ್ಚು ಪರಿಹಾರ ಸಾಮಗಿ್ರ ಹೊತ್ತ ವಿಮಾನ ಭುವನೇಶ್ವರದಲ್ಲಿ ಶನಿವಾರ ಬೆಳಿಗ್ಗೆ ಇಳಿದ ನಂತರ ನಿಲ್ದಾಣವನ್ನು ಮುಚ್ಚಲಾಯಿತು.

ಪಾರಾದೀಪ್‌ ಬಂದರು ಬಂದ್‌: ರಾಷ್ಟ್ರದ 12 ಪ್ರಮುಖ ಬಂದರುಗಳಲ್ಲಿ ಒಂದಾದ ಒಡಿಶಾದ ಪಾರಾದೀಪ್‌ ಬಂದರನ್ನು ಶುಕ್ರವಾರದಿಂದಲೇ ಮುಚ್ಚಲಾಗಿದೆ. ಎಲ್ಲಾ ಹಡಗುಗಳನ್ನೂ ಅಲ್ಲಿಂದ ತೆರವುಗೊಳಿಸಲಾಗಿದೆ. ಕಲ್ಲಿದ್ದಲು, ಕಚ್ಚಾ ತೈಲ ಮತ್ತು ಕಬ್ಬಿಣದ ಅದಿರುಗಳನ್ನು ಸಾಗಿಸುವ ಮುಖ್ಯ ಬಂದರು ಇದಾಗಿದೆ.

ದೆಹಲಿಯಲ್ಲಿ ಸಭೆ: ಫೈಲಿನ್‌ ಚಂಡಮಾರುತ ಎದುರಿಸಲು ವಿವಿಧ ಇಲಾಖೆಗಳು ಮಾಡಿಕೊಂಡಿರುವ ಸಿದ್ಧತೆ ಪರಿಶೀಲನೆಗೆ ಕೇಂದ್ರ ಸಂಪುಟ ಕಾರ್ಯದರ್ಶಿ ಅಜಿತ್‌ ಸೇಠ್‌ ಅವರು ನವದೆಹಲಿಯಲ್ಲಿ ಸಭೆ ನಡೆಸಿದರು.
ಗೃಹ, ರಕ್ಷಣೆ,  ಪೆಟ್ರೋಲಿಯಂ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ವಿನಾಶಕಾರಿ (ವಾಷಿಂಗ್ಟನ್‌, ಲಂಡನ್‌ ವರದಿ): ‘ಫೈಲಿನ್‌’ ಚಂಡಮಾರುತವು 14 ವರ್ಷಗಳ ನಂತರ ಭಾರತ ಕಾಣಲಿರುವ ಅತ್ಯಂತ ವಿನಾಶಕಾರಿ ಚಂಡಮಾರುತ ಎಂದು ಅಮೆರಿಕದ ತಜ್ಞರು ವಿಶ್ಲೇಷಿಸಿದ್ದಾರೆ.

1999ರಲ್ಲಿ ಹತ್ತು ಸಾವಿರ ಜನರ ಸಾವಿಗೆ ಕಾರಣವಾಗಿದ್ದ ಚಂಡ ಮಾರುತ ಕ್ಕಿಂತಲೂ ‘ಫೈಲಿನ್‌’ ಭೀಕರವಾಗಿರಲಿದೆ ಎಂದು ಹವಾಯಿಯ ಪರ್ಲ್‌ ಹಾರ್ಬರ್‌ನ ಅಮೆರಿಕ ನೌಕಾಪಡೆ ಜಂಟಿ ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರದ (ಜೆಟಿಡಬ್ಲುಸಿ) ತಜ್ಞರು  ಹೇಳಿದ್ದಾರೆ. ಲಂಡನ್‌ ಮೂಲದ ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರ ಕೂಡ ಈ ಚಂಡಮಾರುತ ಅತಿ ಭೀಕರವೆಂದು ಅಭಿಪ್ರಾಯಪಟ್ಟಿದೆ.

ಎಲ್ಲೆಲ್ಲಿ ಹೆಚ್ಚು ಹಾನಿ...?
ಚಂಡಮಾರುತದಿಂದಾಗಿ ಒಡಿಶಾದ ಗಜಪತಿ, ಗಂಜಾಂ, ಖುರ್ದಾ, ಪುರಿ, ಜಗತ್‌ಸಿಂಗ್‌ಪುರ, ನಯಾಗಡ, ಕಟಕ್‌, ಭದ್ರಕ್‌ ಮತ್ತು ಕೇಂದ್ರಪಾರ, ಆಂಧ್ರ­ಪ್ರದೇಶದ ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಭಾರಿ ಹಾನಿಯಾಗುವ ಸಂಭವವಿದೆ. ಎರಡೂ ರಾಜ್ಯಗಳ ಹಲವು ಕಡೆಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಕಡಲಲ್ಲಿ 18 ನಾವಿಕರು: ಎಚ್ಚರಿಕೆ ಉಲ್ಲಂಘಿಸಿ ಪಾರಾದೀಪ್‌ ಸಮೀಪ ಸಮುದ್ರಕ್ಕೆ ಇಳಿದ ಅದಿರು ತುಂಬಿದ ಹಡಗೊಂದು ಮುಳುಗುತ್ತಿದ್ದು, ಅದರಲ್ಲಿರುವ 18 ನಾವಿಕರು ಅಪಾಯದಲ್ಲಿದ್ದಾರೆ. ಅವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ.

ಪ್ರಧಾನಿ ಪರಿಶೀಲನೆ
ನವದೆಹಲಿ (ಐಎಎನ್‌ಎಸ್‌):
ದೇಶದ ಪೂರ್ವ ಕರಾವಳಿಗೆ ಅಪ್ಪಳಿಸಿರುವ ಫೈಲಿನ್‌ ಚಂಡಮಾರುತ­ದಿಂದ ಆಗಿರುವ ಅನಾ­ಹುತಗ­ಳು ಮತ್ತು ತೆಗೆದು­ಕೊಂಡಿರುವ ಮುನ್ನಚ್ಚರಿಕೆ ಕ್ರಮಗಳನ್ನು ಪ್ರಧಾನಿ ಮನ­ಮೋಹನ್‌ ಸಿಂಗ್‌ ಪರಿಶೀಲಿಸಿದರು.
ಚಂಡಮಾರುತದಿಂದ ತೊಂದರೆಗೆ ಒಳ­ಗಾದ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವು ನೀಡುವಂತೆ ಪ್ರಧಾನಿ ಆದೇಶಿಸಿದ್ದಾರೆ.

ಫೈಲಿನ್‌ ಸುತ್ತ...
ಎಲ್ಲ ನೆರವು: ಪ್ರಧಾನಿ ಭರವಸೆ
ನವದೆಹಲಿ (ಪಿಟಿಐ):
‘ಫೈಲಿನ್‌’ನಿಂದ ಉಂಟಾಗಬಹುದಾದ ಯಾವುದೇ ಅನಾಹುತ ಎದುರಿಸಲು ತುರ್ತು ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಡಾ. ಮನಮೋಹನ್‌ ಸಿಂಗ್‌ ತಿಳಿಸಿದ್ದಾರೆ.

ಸದ್ಯ ವಿದೇಶ ಪ್ರವಾಸದಲ್ಲಿರುವ ಡಾ. ಸಿಂಗ್‌ ಅವರೊಂದಿಗೆ ಮಾತನಾಡಿರುವ  ಸಂಪುಟ ಕಾರ್ಯದರ್ಶಿ, ತೆಗೆದು ಕೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.

2,000 ಎನ್‌ಡಿಆರ್‌ಎಫ್‌ ಸಿಬ್ಬಂದಿ ನಿಯೋಜನೆ
ನವದೆಹಲಿ (ಪಿಟಿಐ):
‘ಫೈಲಿನ್‌’ ಅನಾಹುತ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಯ ಸುಮಾರು 2,000 ಸಿಬ್ಬಂದಿ ಯನ್ನು ಒಡಿಶಾ ಹಾಗೂ ಆಂಧ್ರ ಕರಾವಳಿಗುಂಟ ಸನ್ನದ್ಧ ಸ್ಥಿತಿಯಲ್ಲಿಡಲಾಗಿದ್ದು, ಈಗಾಗಲೆ 5.4 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.

ಎನ್‌ಡಿಆರ್‌ಎಫ್‌ಗೆ ಸೇರಿದ 29 ತಂಡಗಳ ಜತೆಗೆ ಹೆಚ್ಚುವರಿಯಾಗಿ ತಮಿಳು ನಾಡಿನಿಂದ ನಾಲ್ಕು ತಂಡಗಳನ್ನು ಕರೆಯಿಸಿಕೊಳ್ಳಲಾಗಿದೆ. ಈ  ಸಿಬ್ಬಂದಿಗೆ ಎಲ್ಲ ರೀತಿಯ ಅತ್ಯಾಧುನಿಕ ಸಂಪರ್ಕ ಸಾಧನಗಳನ್ನು ಒದಗಿಸಲಾಗಿದೆ.

ರೈಲು, ವಿಮಾನಗಳ ರದ್ದು
ನವದೆಹಲಿ/ಭುವನೇಶ್ವರ (ಪಿಟಿಐ):
ಪ್ರತಿಕೂಲ ಹವಾಮಾನ, ಭಾರಿ ಮಳೆ ಬೀಳುತ್ತಿರುವುದರಿಂದ ಭುವನೇಶ್ವರ–ವಿಜಯವಾಡಾ, ಹೌರಾ–ಚೆನ್ನೈ ನಡುವಿನ ರೈಲು ಹಾಗೂ ವಿಮಾನ ಸೇವೆಯನ್ನು ಶನಿವಾರದಿಂದ ರದ್ದುಗೊಳಿಸಲಾಗಿದೆ. ಭಾನುವಾರವೂ ಈ ಸೇವೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಮುಂಬೈ–ಭುವನೇಶ್ವರ–ಕೊನಾರ್ಕ್‌ ಎಕ್ಸ್‌ಪ್ರೆಸ್‌ ಸೇರಿ ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದ್ದರೆ ಕೆಲವನ್ನು ಅಲ್ಲಲ್ಲೆ ನಿಲ್ಲಿಸಲು ಸೂಚನೆ ನೀಡಲಾಗಿದೆ.

ಜಾರ್ಖಂಡ್‌ನಲ್ಲೂ ಎಚ್ಚರಿಕೆ
ರಾಂಚಿ (ಪಿಟಿಐ)
: ಪಕ್ಕದ ರಾಜ್ಯ ಒಡಿಶಾಕ್ಕೆ ‘ಫೈಲಿನ್‌’ ಅಪ್ಪಳಿಸು ತ್ತಿರುವುದರಿಂದ ಇದರ ಪರಿಣಾಮ ಜಾರ್ಖಂಡ್‌ ರಾಜ್ಯದ ಕೆಲ ಪ್ರದೇಶಗಳ ಮೇಲೆ ಆಗುವ ಸೂಚನೆ ಇದೆ. ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯಂತೆ ಎಲ್ಲ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ತಿಳಿಸಿದ್ದಾರೆ.

ಗಂಡ ಮಗನನ್ನು ಕಸಿದುಕೊಂಡ ಚಂಡಮಾರುತ ಮತೆ ಬಂತು..
ಕೇಂದ್ರಾಪರ (ಒಡಿಶಾ):
‘ಫೈಲಿನ್‌’ ಭೀತಿ ಎದುರಾಗುತ್ತಲೆ ಗಂಡ ಹಾಗೂ ಹತ್ತು ವರ್ಷದ ಮಗನನ್ನು ಕಸಿದುಕೊಂಡ 1999ರ ‘ಮಹಾ ಚಂಡಮಾರುತ’ದ ಕರಾಳ ದಿನಗಳು ಪ್ರವತಿ ಮೈತಿಗೆ ನೆನಪಾಗುತ್ತಿವೆ.

ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಕರಾವಳಿ ತೀರದ ಎರ್ಸಮಾ ನಿವಾಸಿ ಪ್ರವತಿಗೆ ಈಗ ದು:ಖ ಉಮ್ಮಳಿಸಿ ಬರುತ್ತಿದೆ. ‘ಫೈಲಿನ್‌’  ಮತ್ತೆಷ್ಟು ಜೀವಗಳನ್ನು ಬಲಿ ಪಡೆಯುತ್ತದೆಯೋ ಎಂದು ಆಕೆ ಭೀತಿಗೆ ಒಳಗಾಗಿದ್ದಾಳೆ.

14 ವರ್ಷದ ಹಿಂದೆ ಈ ಭಾಗದವರ ಬದುಕನ್ನೆ ಮೂರಾಬಟ್ಟೆ ಮಾಡಿದ್ದ ಚಂಡಮಾರುತ ಮತ್ತೆ ಅಪ್ಪಳಿಸುತ್ತಿರುವುದರಿಂದ ಶಾಲೆ ಕಾಲೇಜು, ಕಚೇರಿಗಳನ್ನು ತೆರವುಗೊಳಿಸಲಾಗುತ್ತಿದೆ. ಕಡಲ ತೀರದ ಗ್ರಾಮಗಳಲಿ್ಲಯ ಬಹುತೇಕ ಜನರನ್ನು ಸ್ಥಳಾಂತರಿಸ ಲಾಗಿರುವುದರಿಂದ ಈ ಪ್ರದೇಶಗಳು ಭಣಗುಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT