ನವದೆಹಲಿ (ಪಿಟಿಐ): ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಲ್ಲಿ ಸುಪ್ರೀಂಕೋರ್ಟ್ ವಕೀಲರಾದ ಅಪ್ಪ-ಮಗ ಜೋಡಿ ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ಇಬ್ಬರನ್ನೂ ಸೇರಿಸಿರುವುದನ್ನು ಆಕ್ಷೇಪಿಸಿ ಬಾಬ್ ರಾಮ್‌ದೇವ್ ಅವರು ಮಾಡಿರುವ ಟೀಕೆಯನ್ನು ಅಣ್ಣಾ ಹಜಾರೆ ತಳ್ಳಿಹಾಕಿದ್ದು, ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿ ಮಸೂದೆ ರೂಪಿಸುವುದಷ್ಟೇ ಮುಖ್ಯ ಗುರಿ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಇಡೀ ರಾಷ್ಟ್ರವನ್ನು ಒಟ್ಟಿಗೆ ಕೊಂಡೊಯ್ಯುವುದು ಅತ್ಯಗತ್ಯ ಎಂದಿರುವ ಅವರು, ಬಾಬಾ ರಾಮ್‌ದೇವ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ‘ನಾವೆಲ್ಲರೂ ಸೇರಿ ರಾಷ್ಟ್ರದ ಜನರನ್ನು ಮುನ್ನಡೆಸುತ್ತೇವೆ. ರಾಮ್‌ದೇವ್ ಅವರ ಆಂತರ್ಯದಲ್ಲೂ ರಾಷ್ಟ್ರದ ಬಗ್ಗೆ ಪ್ರೀತಿ ತುಂಬಿದೆ. ಮನಸ್ಸಿನಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ಚಿಂತಿಸದೆ ಕೇವಲ ರಾಷ್ಟ್ರವನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಅವರಲ್ಲಿ ಮನವಿ ಮಾಡುತ್ತೇವೆ’ ಎಂದು 73 ವರ್ಷದ ಅಣ್ಣಾ ಹೇಳಿದರು.
‘ಕರಡು ರಚನಾ ಸಮಿತಿಯಲ್ಲಿ ಕಾನೂನು ಜ್ಞಾನದ ಅರಿವಿರುವ ತಜ್ಞರು ಇರುವುದು ಮುಖ್ಯ. ಈ ಸಮಿತಿ ಕೇವಲ ಎರಡು ತಿಂಗಳ ಅವಧಿಗೆ ಮಾತ್ರ ಅಸ್ತಿತ್ವದಲ್ಲಿರುತ್ತದೆ. ನಾವೆಲ್ಲರೂ ಸೇರಿ ಪರಿಣಾಮಕಾರಿ ಕರಡು ಸಿದ್ಧಪಡಿಸಬೇಕು ಎಂದು ಬಾಬಾ ಅವರ ಪಾದಮಟ್ಟಿ ಕೋರುತ್ತೇನೆ’ ಎಂದು ಅಣ್ಣಾ ತಿಳಿಸಿದ್ದಾರೆ.ಸಮಿತಿ ಸದಸ್ಯನಾಗಲು ಆರಂಭದಲ್ಲಿ ತಾವು ಕೂಡ ನಿರಾಕರಿಸಿದ್ದನ್ನು ಇದೇ ವೇಳೆ ಬಹಿರಂಗಪಡಿಸಿದ ಹಜಾರೆ, ಒಂದೇ ಸಮಿತಿಯಲ್ಲಿ ಒಂದೇ ಕುಟುಂಬದ ಇಬ್ಬರು ಇರುವುದು ತಪ್ಪಲ್ಲ; ಅನುಭವಸ್ಥರು ಹಾಗೂ ತಜ್ಞರು ಸಮಿತಿಯಲ್ಲಿರುವುದು ಮುಖ್ಯ ಎಂದರು.
ತಾವು ಶುರುಮಾಡಿದ ಆಂದೋಲನಕ್ಕೆ ರಾಷ್ಟ್ರದ ಜನರಿಂದ ಈ ಪ್ರಮಾಣದ ಬೆಂಬಲವನ್ನು ನಿರೀಕ್ಷಿಸಿರಲಿಲ್ಲ. ಚಳವಳಿ ಇಷ್ಟೊಂದು ದೊಡ್ಡಮಟ್ಟಕ್ಕೆ ಬೆಳೆಯುತ್ತದೆಂಬ ಕಲ್ಪನೆಯೂ ನನಗೆ ಇರಲಿಲ್ಲ. ನಾನು ಮಹಾರಾಷ್ಟ್ರದಲ್ಲಿ ಮಾತ್ರ ಆಂದೋಲನ ನಡೆಸೋಣ ಎಂದುಕೊಂಡಿದ್ದೆ. ಆದರೆ ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್ ಮತ್ತು ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿಯಲ್ಲಿ ಆಮರಣಾಂತ ಉಪವಾಸ ನಡೆಸುವ ಸಲಹೆ ನೀಡಿದರು ಎಂದು ತಿಳಿಸಿದರು.
ಮಸೂದೆಯನ್ನು ತ್ವರಿತವಾಗಿ ಮಂಡಿಸುವುದಕ್ಕೋಸ್ಕರ ವಿಶೇಷ ಅಧಿವೇಶನ ಕರೆಯುವ ಅಗತ್ಯವಿಲ್ಲ. ವಿಶೇಷ ಅಧಿವೇಶನ ಕರೆದರೆ ಆರ್ಥಿಕವಾಗಿ ಹೆಚ್ಚು ಹೊರೆ ಬೀಳುತ್ತದೆ ಎಂದೂ ಹಜಾರೆ ಹೇಳಿದ್ದಾರೆ.ಸಮಿತಿ ಸದಸ್ಯರಲ್ಲಿ ಒಬ್ಬರಾದ ಪ್ರಮುಖ ಚಳವಳಿಕಾರ ಅರವಿಂದ್ ಕೇಜ್ರಿವಾಲ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಕೂಡ, ಸಮಿತಿಯಲ್ಲಿ ಯಾರಿರುತ್ತಾರೆ ಎಂಬುದು ಮುಖ್ಯವಲ್ಲ; ಪ್ರಬಲ ಕರಡು ಸಿದ್ಧಪಡಿಸುವುದೇ ಮುಖ್ಯ ಎಂದಿದ್ದಾರೆ.
ತಾವು ಕಳೆದ ರಾತ್ರಿ ರಾಮ್‌ದೇವ್ ಅವರೊಂದಿಗೆ ಮಾತನಾಡಿದ್ದು ತಪ್ಪು ತಿಳಿವಳಿಕೆ ದೂರವಾಗಿದೆ ಎಂದೂ ಕೇಜ್ರಿವಾಲ್ ಹೇಳಿದ್ದಾರೆ.‘ಸಮಿತಿಯಸದಸ್ಯೆಯಾಗಬೇಕೆಂಬ ಉದ್ದೇಶ ನನಗೆ ಇಲ್ಲ. ಈಗ ಸಮಿತಿಯಲ್ಲಿರುವ ನಾಗರಿಕ ಪ್ರತಿನಿಧಿಗಳು ಉತ್ಕೃಷ್ಠ ಎ ಪ್ಲಸ್ ದರ್ಜೆ ಮಟ್ಟದವರಾಗಿದ್ದಾರೆ. ಸರ್ಕಾರದ ಕಾರ್ಯನಿರ್ವಹಣಾ ರೀತಿಯನ್ನು ಹತ್ತಿರದಿಂದ ಬಲ್ಲವರು ಹಾಗೂ ಕಾನೂನು ರೂಪಿಸಲು ನೆರವು ನೀಡಬಲ್ಲವರು ಸಮಿತಿಯಲ್ಲಿ ಇರಬೇಕು’ ಎಂದು ಕಿರಣ್‌ಬೇಡಿ ಅಭಿಪ್ರಾಯಪಟ್ಟಿದ್ದಾರೆ.
ಅಭ್ಯಂತರವಿಲ್ಲ- ರಾಮ್‌ದೇವ್
ಹರಿದ್ವಾರ (ಪಿಟಿಐ): ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಲ್ಲಿ ಅಪ್ಪ-ಮಗ ಜೋಡಿ ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್ ಇಬ್ಬರಿಗೂ ಸದಸ್ಯತ್ವ ನೀಡಿರುವುದಕ್ಕೆ ಶನಿವಾರ ಆಕ್ಷೇಪ ಎತ್ತಿದ್ದ ಯೋಗಗುರು ಬಾಬಾ ರಾಮ್‌ದೇವ್, ಈ ಇಬ್ಬರು ಸಮಿತಿಯಲ್ಲಿರುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.
‘ ಈ ಆಕ್ಷೇಪವನ್ನು ಎತ್ತಿದ್ದು ಮಾಧ್ಯಮಗಳೇ ಹೊರತು ನಾನಲ್ಲ. ಈ ಬಗ್ಗೆ ನನ್ನನ್ನು ಸುದ್ದಿಗಾರರು ಕೇಳಿದಾಗ, ಚಳವಳಿಯಲ್ಲಿ ಪಾತ್ರ ವಹಿಸಿದ ನಮಗೆ ಸಮಿತಿಯಲ್ಲಿ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲವೆಂದಷ್ಟೇ ಪ್ರತಿಕ್ರಿಯಿಸಿದ್ದೆ’ ಎಂದಿದ್ದಾರೆ.
‘ಸಮಿತಿಯಲ್ಲಿ ಭೂಷಣ್ ದ್ವಯರು ಇರಬೇಕೆಂದು ಅಣ್ಣಾ ಹಜಾರೆ ಅವರು ತೆಗೆದುಕೊಂಡ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಕಿರಣ್ ಬೇಡಿ ಅವರು ಸಮಿತಿಯಲ್ಲಿ ಇರಬೇಕೆಂಬುದು ಕಾರ್ಯಕರ್ತರ ಆಶಯವಾಗಿತ್ತು ಎಂದು ನಾನು ಅಭಿಪ್ರಾಯಪಟ್ಟಿದ್ದೆ’ ಎಂದೂ ಅವರು ತಿಳಿಸಿದ್ದಾರೆ.
ಸಮಿತಿಯಲ್ಲಿ ತಮ್ಮಿಬ್ಬರನ್ನೂ ಸೇರಿಸಿರುವ ಬಗ್ಗೆ ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ಅವರೇ ಆಕ್ಷೇಪ ಎತ್ತಿದ್ದರು. ಆದರೆ ಇಬ್ಬರೂ ತಜ್ಞರಾದ್ದರಿಂದ ಸಮಿತಿಯಲ್ಲಿ ಇರಬೇಕೆಂದು ಸ್ವತಃ ಹಜಾರೆ ಅಪೇಕ್ಷೆಪಟ್ಟರು ಎನ್ನಲಾಗಿದೆ.ಸಮಿತಿ ರಚನೆಯಲ್ಲಿ ಸ್ವಜನಪಕ್ಷಪಾತ ಏಕೆ? ತಂದೆ ಮತ್ತು ಇಬ್ಬರನ್ನೂ ಒಂದೇ ಸಮಿತಿಯಲ್ಲಿ ಏಕೆ ಸೇರಿಸಬೇಕು?- ಎಂದು ರಾಮದೇವ್ ಕೇಳಿದ್ದರು.
‘ನಾಗರಿಕರ ಪ್ರತಿನಿಧಿಗಳಾಗಿ ಜಂಟಿ ಸಮಿತಿಯಲ್ಲಿ ಯಾರು ಇರಬೇಕೆಂಬ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ. ಈ ಕುರಿತ ಮೊದಲ ಕರಡನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್ ಮತ್ತು ನಾನು ಸಿದ್ಧಪಡಿಸಿದ್ದೆವು. ಈಗ ಕೂಡ ನಾವು ಸಮಿತಿಯಲ್ಲಿದ್ದೇವೆ’ ಎಂದು ಕೇಜ್ರಿವಾಲ್ ವಿವರಿಸಿದ್ದಾರೆ.
ಈ ಆಂದೋಲನಕ್ಕೆ ಬೆಂಬಲ ಸೂಚಿಸಿ ಹೆಸರು ನೋಂದಣಿ ಮಾಡಿಸಲು ಸಾರ್ವಜನಿಕರಿಗಾಗಿ ಸಹಾಯವಾಣಿ ಸ್ಥಾಪಿಸಲಾಗುವುದು. ಜಂಟಿ ಸಮಿತಿಯ ಕಾರ್ಯದ ಬಗ್ಗೆ ನೋಂದಾಯಿತರಿಗೆ ಕಾಲಕಾಲಕ್ಕೆ ಎಲ್ಲ ವಿವರ ತಿಳಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.