ADVERTISEMENT

ಅಭಿವೃದ್ಧಿ ಪೂರಕ ಕಾನೂನು ಅಗತ್ಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST
ಅಭಿವೃದ್ಧಿ ಪೂರಕ ಕಾನೂನು ಅಗತ್ಯ
ಅಭಿವೃದ್ಧಿ ಪೂರಕ ಕಾನೂನು ಅಗತ್ಯ   

ಹೈದರಾಬಾದ್ (ಪಿಟಿಐ):  ತ್ವರಿತ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬಲ್ಲ ಕಾನೂನು ವ್ಯವಸ್ಥೆಯು ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಅವಶ್ಯಕವಾಗಿದೆ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಅವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್‌ನಲ್ಲಿ ಭಾನುವಾರ 17ನೇ ಕಾಮನ್‌ವೆಲ್ತ್ ಕಾನೂನು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಸಿಂಗ್ ಅವರು, ‘ ಅಭಿವೃದ್ಧಿಯಿಂದ ಪಡೆದುಕೊಂಡದ್ದನ್ನು ಎಲ್ಲರಿಗೂ ಸಮನಾಗಿ ಹಂಚಲು ಉತ್ತೇಜನ ನೀಡುವ ವ್ಯವಸ್ಥೆಯನ್ನೂ ರೂಪಿಸಬೇಕು’ ಎಂದು ಹೇಳಿದರು.

‘ಭಾರಿ ಪ್ರಮಾಣದ ಆರ್ಥಿಕ ಅಭಿವೃದ್ಧಿ ಸಾಧಿಸಲು, ಅತ್ಯಂತ ಪರಿಣಾಮಕಾರಿ ಮತ್ತು ತ್ವರಿತ ಒಪ್ಪಂದಗಳ ಜಾರಿ ಹಾಗೂ ಕಾನೂನು ನಿಬಂಧನೆಗಳನ್ನು ಆಧಾರಿತ ಸಮರ್ಥ ಕಾನೂನು ವ್ಯವಸ್ಥೆ ನಿರ್ಣಾಯಕ’ ಎಂದು ಅವರು ತಿಳಿಸಿದರು.

ADVERTISEMENT

‘ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಕಂಡುಬರುತ್ತಿರುವ ಸಾಮೂಹಿಕ ಬಡತನ ಸಮಸ್ಯೆಗೆ ತ್ವರಿತ ಆರ್ಥಿಕ ಅಭಿವೃದ್ಧಿಯೇ ಉತ್ತಮ ಪರಿಹಾರ ಎಂಬುದು ನನ್ನ ದೃಢವಾದ ನಂಬಿಕೆ’ ಎಂದು ಪ್ರಧಾನಿ ಸಿಂಗ್ ತಿಳಿಸಿದರು.

ಅತ್ಯಂತ ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಕಾನೂನು ವ್ಯವಸ್ಥೆಯು ನಿರಂತರವಾಗಿ ಬದಲಾವಣೆಯನ್ನು ತನ್ನಷ್ಟಕ್ಕೆ ತಾನೆ ಅಳವಡಿಸಿಕೊಳ್ಳಬೇಕು ಎಂದೂ ಸಿಂಗ್           ವಿವರಿಸಿದರು.

ಸೌಲಭ್ಯ ಸಾಧ್ಯವಿಲ್ಲ:  ಸರ್ಕಾರದಿಂದ ದೇಶದ ಎಲ್ಲಾ ನಾಗರಿಕರಿಗೂ ಆಹಾರ, ಶಿಕ್ಷಣ ಹಾಗೂ ಆರೋಗ್ಯ ಸೇವೆ ನೀಡಲು ಸಾಧ್ಯವಿಲ್ಲ ಆದರೆ ಅಭಾವ ಹೊಂದಿದ ವರ್ಗದ ಜನರಿಗೆ ನೆರವು ನೀಡಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಹೇಳಿದ್ದಾರೆ.

ಕಾನೂನು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಕಪಾಡಿಯಾ, ‘ದೇಶದ ಪ್ರತಿಯೊಬ್ಬ ನಾಗರಿಕನಿಗೂ ಎಲ್ಲಾ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ ಬಡತನ ರೇಖೆಗಿಂತ ಕೆಳಗಡೆ ಇರುವವರ ಅಗತ್ಯತೆಗಳನ್ನು ಅದು ಪೂರೈಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.