ADVERTISEMENT

ಅಭ್ಯರ್ಥಿಗಳ ವಿರುದ್ಧ ಕ್ರಮ: ತಡೆ ನೀಡಲು ನಕಾರ

ಕೆಪಿಎಸ್‌ಸಿ ಅಕ್ರಮ: ಕರ್ನಾಟಕ ಸರ್ಕಾರದ ಅಧಿಸೂಚನೆ ಎತ್ತಿ ಹಿಡಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2011ರಲ್ಲಿ ಆಯ್ಕೆ ಮಾಡಿದ್ದ 362 ಅಭ್ಯರ್ಥಿಗಳ ನೇಮಕದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ರದ್ದು ಮಾಡಿರುವ ಕ್ರಮವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

ಈ 362 ಅಭ್ಯರ್ಥಿಗಳ ವಿರುದ್ಧ ಕರ್ನಾಟಕ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಂತೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಅಥವಾ ಕ್ರಮಗಳು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತವೆ ಎಂದು ಕೋರ್ಟ್‌ ಹೇಳಿದೆ.

ADVERTISEMENT

ಗ್ರೂಪ್‌ ‘ಎ‘ ಮತ್ತು ಗ್ರೂಪ್‌ ‘ಬಿ‘ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಕೆಪಿಎಸ್‌ಸಿ 2011ರಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಮಾರ್ಚ್ 9ರಂದು ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್‌, ಎಲ್ಲ 362 ಅಭ್ಯರ್ಥಿಗಳ ನೇಮಕಾತಿ ಆದೇಶ ರದ್ದುಪಡಿಸಿತ್ತು.

ಇದನ್ನು ಪ್ರಶ್ನಿಸಿ 25 ಅಭ್ಯರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್‌ ಗೋಯಲ್‌ ಹಾಗೂ ಆರ್‌.ಎಫ್‌. ನಾರಿಮನ್‌ ಅವರ ಪೀಠ ಸರ್ಕಾರದ ಆದೇಶದ ವಿರುದ್ಧ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಸರ್ಕಾರದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ: 2011ನೇ ಸಾಲಿನಲ್ಲಿ ನಡೆಸಿದ ಗೆಜೆಟೆಡ್‌ ಪ್ರೊಬೆಷನರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದ ಆರೋಪಗಳ ಬಗ್ಗೆ ತನಿಖಾ ಸಂಸ್ಥೆ ನೀಡಿದ ವರದಿ ಆಧಾರದ ಮೇಲೆ ಸರ್ಕಾರ ನೇಮಕಾತಿ ಅಧಿಸೂಚನೆ ಹಿಂದಕ್ಕೆ ಪಡೆದಿದೆ. ಇದರಲ್ಲಿ ಯಾವ ತಪ್ಪು ಕಾಣುತ್ತಿಲ್ಲ ಎಂದು ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

‘ಅಕ್ರಮ ನಡೆದ ಶಂಕೆಯ ಮೇಲೆ ಸರ್ಕಾರ ಅಧಿಸೂಚನೆ ಹಿಂದಕ್ಕೆ ಪಡೆದಿದೆ. ಹೀಗಿದ್ದರೂ ಅಭ್ಯರ್ಥಿಗಳು ನೇಮಕಾತಿ ತಮ್ಮ ಹಕ್ಕು ಎಂದು ಪ್ರತಿಪಾದಿಸಬಹುದೇ’ ಎಂದು
ನ್ಯಾಯಮೂರ್ತಿಗಳು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು.

‘ತನಿಖಾ ಸಂಸ್ಥೆ (ಸಿಐಡಿ) ನೀಡಿದ ವರದಿ ನೋಡಿ. ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರದ ಮುಖ್ಯ ಭಾಗವಾಗಲಿದ್ದಾರೆ. ಸರ್ಕಾರ ಕಾನೂನುಬಾಹಿರವಾಗಿ ನಡೆದುಕೊಂಡರೆ ಇಲ್ಲವೇ ಅಧಿಕಾರ ದುರುಪಯೋಗ ಪಡಿಸಿಕೊಂಡಲ್ಲಿ ಮಾತ್ರವೇ ಅದರ ಆಡಳಿತಾತ್ಮಕ ನಿರ್ಧಾರವನ್ನು ಪ್ರಶ್ನಿಸಬಹುದು’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಅಕ್ರಮ: ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಹೈಕೋರ್ಟ್‌ ವಿಫಲ
ಪರೀಕ್ಷೆಯಲ್ಲಿ ಅಕ್ರಮ ಎಸಗಿದವರು ಮತ್ತು ಇತರರನ್ನು ಪ್ರತ್ಯೇಕಿಸುವಲ್ಲಿ ಕರ್ನಾಟಕ ಹೈಕೋರ್ಟ್‌ ವಿಫಲವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಪರೀಕ್ಷೆಯಲ್ಲಿ ಕೆಲವರು ಮಾತ್ರ ಅಕ್ರಮ ಎಸೆಗಿದ್ದಾರೆ. ಹಾಗಂತ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಶಂಕಿಸುವುದು ಎಷ್ಟು ಸರಿ ಎಂದು ಅರ್ಜಿದಾರರ ಪರ ವಕೀಲರು ಪ್ರಶ್ನಿಸಿದರು. ಹೈಕೋರ್ಟ್‌ ಆದೇಶದ ಆಧಾರದ ಮೇಲೆ ಕರ್ನಾಟಕ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದರು.

ಮನವಿಯನ್ನು ತಳ್ಳಿ ಹಾಕಿದ ನ್ಯಾಯಮೂರ್ತಿಗಳು, ಸರ್ಕಾರದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡುವ ಅಂತಿಮ ತೀರ್ಪಿನ ಮೇಲೆ ರಾಜ್ಯ ಸರ್ಕಾರದ ಆದೇಶಗಳು ಅವಲಂಬಿತ
ವಾಗಿರುತ್ತವೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.