ADVERTISEMENT

ಅಮರನಾಥ ಯಾತ್ರೆ: 16 ಸಾವು

ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಕಂದಕಕ್ಕೆ ಉರುಳಿದ ಬಸ್‌: 27 ಮಂದಿಗೆ ಗಾಯ

ಪಿಟಿಐ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಕಂದಕಕ್ಕೆ ಉರುಳಿದ ಬಸ್‌
ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಕಂದಕಕ್ಕೆ ಉರುಳಿದ ಬಸ್‌   

ರಾಂಬನ್‌/ಜಮ್ಮು: ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ  ಭಾನುವಾರ ಮಧ್ಯಾಹ್ನ ಆಳವಾದ ಕಂದಕಕ್ಕೆ ಬಸ್‌ ಉರುಳಿದ ಪರಿಣಾಮ 16 ಮಂದಿ ಅಮರನಾಥ ಯಾತ್ರಾರ್ಥಿಗಳು ಸಾವಿಗೀಡಾಗಿದ್ದು,  27 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ.

ಜಮ್ಮುನಿಂದ ಶ್ರೀನಗರದತ್ತ ತೆರಳುತ್ತಿದ್ದಾಗ ರಾಂಬನ್‌  ಜಿಲ್ಲೆಯ ಬನಿಹಾಳ್ ಸಮೀಪದ ನಾಚಿಲನ ಪ್ರದೇಶದಲ್ಲಿನ ಸೇನಾ ಶಿಬಿರವೊಂದರ ಬಳಿ ಸುಮಾರು 150 ಅಡಿ ಆಳದ ಕಂದಕದಲ್ಲಿ ಬಸ್‌ ಉರುಳಿ ಬಿದ್ದಿದೆ.

ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ  ಜಮ್ಮು ಮತ್ತು ಕಾಶ್ಮೀರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌, ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕಂದಕಕ್ಕೆ ಉರುಳಿಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತೀವ್ರ ಗಾಯಗೊಂಡಿರುವ 19 ಯಾತ್ರಾರ್ಥಿಗಳನ್ನು ವಿಶೇಷ ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ ಮೂಲಕ ಜಮ್ಮುಗೆ ಸಾಗಿಸಲಾಗಿದೆ. ಮೃತಪಟ್ಟವರು ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಅಸ್ಸಾಂ, ಹರಿಯಾಣ ಮತ್ತು ಮಧ್ಯಪ್ರದೇಶಕ್ಕೆ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ ಅಪಘಾತಕ್ಕೀಡಾದ ಮಾಹಿತಿ ತಿಳಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ   ದೇಹಗಳನ್ನು ಕಂದಕದಿಂದ ಹೊರತೆಗೆಯಲು ಮತ್ತು ಗಾಯಗೊಂಡವರನ್ನು ರಕ್ಷಿಸಲು ನೆರವಾದರು. ಪೊಲೀಸ್‌ ಮತ್ತು ಸೇನಾ ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸಹ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.

ಅಪಘಾತದಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ತಿಳಿಸಿದ್ದಾರೆ. 40 ದಿನಗಳ ಅಮರನಾಥ ಯಾತ್ರೆ ಜುಲೈ 29ರಿಂದ ಆರಂಭವಾಗಿದ್ದು ಆಗಸ್ಟ್‌ 7ರಂದು ಅಂತ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.