.jpg)
ಕಾನ್ಪುರ (ಪಿಟಿಐ): ಅತ್ಯಾಚಾರಕ್ಕೆ ಒಳಗಾಗುವ ಸಂತ್ರಸ್ತರಿಗೆ ನಡೆಸುವ ಅಮಾನವೀಯ ಎರಡು ಬೆರಳು ಪರೀಕ್ಷೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ವಿಧಿವಿಜ್ಞಾನ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಅತ್ಯಾಚಾರಕ್ಕೆ ಒಳಗಾದವರ ಗೋಪ್ಯತೆ ಕಾಯ್ದುಕೊಳ್ಳುವ ಸೂಕ್ತ ವ್ಯವಸ್ಥೆಯೊಂದಿಗೆ ಮಾರ್ಗದರ್ಶಿ ಸೂತ್ರದಲ್ಲಿ ಪಟ್ಟಿ ಮಾಡಲಾದ ಎಲ್ಲ ಅಗತ್ಯ ಉಪಕರಣಗಳೂ ಈ ಕೊಠಡಿಯಲ್ಲಿ ಇರಬೇಕು ಎಂದು ತಿಳಿಸಲಾಗಿದೆ.
ಸಂತ್ರಸ್ತರ ವೈದ್ಯಕೀಯ ಹಾಗೂ ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸಲು ಅಗತ್ಯ ಉಪಕರಣಗಳನ್ನು ಒಳಗೊಂಡ ಪ್ರತ್ಯೇಕ ಕೋಣೆ ಇರಬೇಕು. ಮೇಲಾಗಿ ಅತ್ಯಾಚಾರ ದೃಢಪಡಿಸಲು ಈಗ ಅನುಸರಿಸಲಾಗುತ್ತಿರುವ ತೀವ್ರ ಆಘಾತಕಾರಿಯಾದ ‘ಎರಡು ಬೆರಳು ಪರೀಕ್ಷೆ’ ಅವೈಜ್ಞಾನಿಕ ಎಂದು ಹೇಳಲಾಗಿದೆ.
ತಜ್ಞರ ಸಹಕಾರದೊಂದಿಗೆ ಆರೋಗ್ಯ ಸಂಶೋಧನೆ ಇಲಾಖೆ (ಡಿಎಚ್‌ಆರ್) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜಂಟಿಯಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು ಇವು ಈಗ ಅನುಸರಿಸಲಾಗುತ್ತಿರುವ ‘ಅಮಾನವೀಯ’ ಪದ್ಧತಿಯನ್ನು ಕೊನೆಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ವೈದ್ಯಕೀಯ ಸಿಬ್ಬಂದಿಗೆ ಸಲಹೆ: ಅತ್ಯಾಚಾರ ಪ್ರಕರಣಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಸಂಬಂಧಿಸಿದ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಕುರಿತು ತರಬೇತಿ ನೀಡುವ ಪ್ರಸ್ತಾಪವೂ ಮಾರ್ಗಸೂಚಿಯಲ್ಲಿದೆ.
ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ವೈದ್ಯರನ್ನು ಹೊರತುಪಡಿಸಿ ಮೂರನೇ ವ್ಯಕ್ತಿ ಹಾಜರಿರಕೂಡದು, ಪುರುಷ ವೈದ್ಯರು ಪರೀಕ್ಷೆ ನಡೆಸುವುದಾದರೆ ಒಬ್ಬ ಮಹಿಳಾ ಸಹಾಯಕಿ ಅಲ್ಲಿ ಇರಬೇಕಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.
‘ಅತ್ಯಾಚಾರ’ ಎನ್ನುವುದು ಕಾನೂನು ವ್ಯಾಖ್ಯೆಯಾಗಿದ್ದು ವೈದ್ಯಕೀಯ ಪದ ಅಲ್ಲ, ಹಾಗಾಗಿ ವೈದ್ಯರು ತಮ್ಮ ಅಭಿಪ್ರಾಯ ಮಂಡಿಸುವ ಸಂದರ್ಭ ‘ಅತ್ಯಾಚಾರ’ ಎಂಬ ಪದ ಬಳಸುವಂತಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.