ADVERTISEMENT

ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST
ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತ್ಯಕ್ಷ
ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತ್ಯಕ್ಷ   

 ಅಮೇಥಿ (ಐಎಎನ್‌ಎಸ್): ಬೇರು  ಮಟ್ಟದ ರಾಜಕೀಯ ಚಟುವಟಿಕೆ      ಗಳಿಂದ ದೂರ ಉಳಿದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಪುತ್ರಿ ಪ್ರಿಯಾಂಕಾ  ಸೋಮವಾರ ಅಮೇಥಿಯಲ್ಲಿ ದಿಢೀರ್ ಎಂದು ಕಾಣಿಸಿಕೊಂಡರು.
ಇದರಿಂದ ಸ್ಥಳೀಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.

ಫೆಬ್ರುವರಿಯಲ್ಲಿ ನಡೆಯುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ತನ್ನ ಅಸ್ತಿತ್ವ ದೃಷ್ಟಿಯಿಂದ  ಅತ್ಯಂತ ಮಹತ್ವದ್ದಾಗಿದ್ದು, ಆ ಪಕ್ಷಕ್ಕೆ ಮತದಾರರನ್ನು ಸೆಳೆಯುವ ಯತ್ನದಲ್ಲಿ ತಮ್ಮ ಸಹೋದರ ರಾಹುಲ್ ಜತೆ ಪ್ರಿಯಾಂಕ ಕೈಜೋಡಿಸಿದ್ದಾರೆ.

 ದೆಹಲಿಯಿಂದ ಫುರಸತ್‌ಗಂಜ್‌ಗೆ ಖಾಸಗಿ ವಿಮಾನದಲ್ಲಿ ಬಂದಿಳಿದ ಪ್ರಿಯಾಂಕಾ ಮೂರು ದಿನಗಳ ತಮ್ಮ ಭೇಟಿಯಲ್ಲಿ ತಮ್ಮ ಸಹೋದರ ಮತ್ತು ತಾಯಿ ಪ್ರತಿನಿಧಿಸುವ ಅಮೇಥಿ ಹಾಗೂ ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿನ ವಿಧಾನಸಭಾ ಅಭ್ಯರ್ಥಿಗಳ ಜತೆ  ಸಭೆ ನಡೆಸಲಿದ್ದಾರೆ.

ನೇರವಾಗಿ ಚುನಾವಣಾ ಪ್ರಚಾರಕ್ಕೆ ಇಳಿಯುವ ಯೋಜನೆ ಅವರಿಗೆ ಇಲ್ಲವಾದರೂ ಪ್ರಿಯಾಂಕಾ ಭೇಟಿಯಿಂದಾಗಿ ಕಾಂಗ್ರೆಸ್ ನಾಯಕರಿಗೆ ನೂರಾನೆ ಬಲ ಬಂದಂತಾಗಿದೆ.

`ಪಕ್ಷದ ಕಾರ್ಯಕರ್ತರ ಬೇಡಿಕೆಗೆ ಮಣಿದು ಅವರು ಇಲ್ಲಿಗೆ ಬಂದಿದ್ದಾರೆ. ಇದರಿಂದ ನಮ್ಮ ಪ್ರಚಾರದ ವೇಗ ದ್ವಿಗುಣಗೊಂಡಂತಾಗಿದೆ~ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.