ADVERTISEMENT

ಅಯೋಧ್ಯೆಯಲ್ಲಿ ರಾಹುಲ್ ಗಾಂಧಿ

24 ವರ್ಷದ ಬಳಿಕ ನೆಹರೂ ಕುಟುಂಬದವರ ಮೊದಲ ಭೇಟಿ

ಪಿಟಿಐ
Published 9 ಸೆಪ್ಟೆಂಬರ್ 2016, 19:30 IST
Last Updated 9 ಸೆಪ್ಟೆಂಬರ್ 2016, 19:30 IST
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಅಯೋಧ್ಯಾದ ಹನುಮಾನ್‌ ಗಢಿ ದೇವಸ್ಥಾನಕ್ಕೆ ಭೇಟಿ ನೀಡಿದರು –ಪಿಟಿಐ ಚಿತ್ರ
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಅಯೋಧ್ಯಾದ ಹನುಮಾನ್‌ ಗಢಿ ದೇವಸ್ಥಾನಕ್ಕೆ ಭೇಟಿ ನೀಡಿದರು –ಪಿಟಿಐ ಚಿತ್ರ   

ಅಯೋಧ್ಯೆ: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಮತದಾರರನ್ನು ಸೆಳೆಯುವ ಉದ್ದೇಶದಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಲ್ಲಿನ ಹನುಮಾನ್ ಗಢಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

1992ರಲ್ಲಿ ವಿವಾದಿತ ಬಾಬ್ರಿ ಮಸೀದಿ ಧ್ವಂಸಗೊಂಡ ಬಳಿಕ ಇಲ್ಲಿಗೆ ಭೇಟಿ ನೀಡಿದ ನೆಹರೂ–ಗಾಂಧಿ ಕುಟುಂಬದ ಮೊದಲ ವ್ಯಕ್ತಿ ರಾಹುಲ್ ಆಗಿದ್ದಾರೆ. 24 ವರ್ಷಗಳಲ್ಲಿ ನೆಹರೂ ಕುಟುಂಬದ ಯಾರೂ ಇಲ್ಲಿಗೆ ಭೇಟಿ ನೀಡಿರಲಿಲ್ಲ.

ಆದರೆ 1989ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ‘ಶಿಲಾನ್ಯಾಸ’ ಸ್ಥಳಕ್ಕೆ ರಾಹುಲ್‌ ಹೋಗಿಲ್ಲ. ಉತ್ತರಪ್ರದೇಶದಲ್ಲಿ ಕೈಗೊಂಡಿರುವ  ಮಹಾಯಾತ್ರೆಯ ನಾಲ್ಕನೇ ದಿನದ ಕಾರ್ಯಕ್ರಮಕ್ಕೂ ಮೊದಲು ಅಯೋಧ್ಯೆಗೆ ಭೇಟಿ ನೀಡಿದ ರಾಹುಲ್, ವಿಶ್ವಹಿಂದೂ ಪರಿಷತ್‌ ವಿರೋಧಿ ನಿಲುವು ಹೊಂದಿರುವ ಮಹಾಂತ ಜ್ಞಾನ ದಾಸ್ ಅವರನ್ನು ಭೇಟಿ ಮಾಡಿದರು.

ಮಹಾಂತ ಜ್ಞಾನ ದಾಸ್ ಅವರು ಹಿಂದೂ ಹಾಗೂ ಸಿಖ್ ಸಾಧು, ಸಂತರ ಅತ್ಯುನ್ನತ ಸಂಘಟನೆಯಾದ ಅಖಿಲ ಭಾರತ ಅಖಾರ ಪರಿಷತ್‌ನ ಸದಸ್ಯರು.

ಕಾರ್ಯತಂತ್ರದ ಭಾಗ: ವಿವಾದಿತ ರಾಮಜನ್ಮಭೂಮಿ–ಬಾಬ್ರಿಮಸೀದಿ ಸ್ಥಳದಲ್ಲಿರುವ ರಾಮಮಂದಿರದಿಂದ ಒಂದು ಕಿ.ಮೀ. ದೂರದಲ್ಲಿರುವ ಹನುಮಾನ್ ಗಢಿ ದೇವಸ್ಥಾನಕ್ಕೆ ರಾಹುಲ್ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಗಮನಾರ್ಹ ಬೆಳವಣಿಗೆ ಎನಿಸಿದೆ. ಅಯೋಧ್ಯೆಗೆ ರಾಹುಲ್ ಭೇಟಿ ನೀಡುವ ಮೂಲಕ ಅವರು ತಳೆದಿರುವ ಮೆದು ಹಿಂದುತ್ವ ಧೋರಣೆಯನ್ನು ರಾಜಕೀಯ ವೀಶ್ಲೇಷಕರು ಗಮನಿಸಿದ್ದಾರೆ.

ಕಾಂಗ್ರೆಸ್‌ನ ಪ್ರತಿ ನಡೆಯನ್ನು ನಿರ್ದೇಶಿಸುವ ಚುನಾವಣಾ ಕಾರ್ಯತಂತ್ರ ಚತುರ ಪ್ರಶಾಂತ್ ಕಿಶೋರ್ ಅವರ ಸಲಹೆ ಮೇರೆಗೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಬ್ರಾಹ್ಮಣ ಸಮುದಾಯಒಲಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಅದರ ಮುಂದುವರಿದ ಭಾಗ ಇದು ಎಂದು ವಿಶ್ಲೇಷಿಸಲಾಗುತ್ತಿದೆ. 

ಕಾಂಗ್ರೆಸ್‌ ಬಗ್ಗೆ ಹಿಂದೂಗಳು ಹೊಂದಿರುವ ಋಣಾತ್ಮಕ ಭಾವನೆಯನ್ನು ದೂರವಾಗಿಸುವುದೂ ರಾಹುಲ್ ಅವರ ಇಂದಿನ ನಡೆಯ ಉದ್ದೇಶ ಎಂದು ಹೇಳಲಾಗುತ್ತಿದೆ. 26 ವರ್ಷಗಳ ಹಿಂದೆ ರಾಜೀವ್ ಗಾಂಧಿ ಅವರು ಕೈಗೊಂಡಿದ್ದ ಸದ್ಭಾವನಾ ಯಾತ್ರೆಯ ವೇಳೆ ಅಯೋಧ್ಯೆಗೆ ಭೇಟಿ ನೀಡಬೇಕಿತ್ತು. ಆದರೆ ಸಮಯದ ಅಭಾವದಿಂದ ಅವರು ಭೇಟಿ ನೀಡಿರಲಿಲ್ಲ. ಮರುವರ್ಷ 1991ರಲ್ಲಿ ಅವರ ಹತ್ಯೆ ನಡೆದಿತ್ತು.

2 ದಿನ ಯಾತ್ರೆ ಸ್ಥಗಿತ: ಈದ್ ಹಬ್ಬದ ಕಾರಣ 12 ಮತ್ತು 13ರಂದು ಎರಡು ದಿನಗಳ ಕಾಲ ರಾಹುಲ್ ಅವರ ಕಿಸಾನ್ ಮಹಾಯಾತ್ರೆ ಸ್ಥಗಿತಗೊಳ್ಳಲಿದೆ. 14ರಂದು ಮತ್ತೆ ಮುಂದುವರಿಯಲಿದೆ.

ಮುಖ್ಯಾಂಶಗಳು
* ಹಿಂದೂ ಮತದಾರರ ಓಲೈಕೆಗೆ ರಾಹುಲ್ ಯತ್ನ
* ಹನುಮಾನ್ ಗಢಿ ದೇವಸ್ಥಾನಕ್ಕೆ ಭೇಟಿ
* ಮಹಾಂತ ಜ್ಞಾನ ದಾಸ್ ಜತೆ ಮಾತುಕತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.