ADVERTISEMENT

ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ- ಖುರ್ಷಿದ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ನವದೆಹಲಿ: ಅಂಗವಿಕಲರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಉತ್ತರಪ್ರದೇಶದಲ್ಲಿ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ತಮ್ಮ ಪಾತ್ರವಿದೆ ಎಂಬ ಅರವಿಂದ್ ಕೇಜ್ರಿವಾಲ್ ಅವರ ಆಪಾದನೆಗೆ ಖಾರವಾದ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ.

ಕೇಜ್ರಿವಾಲ್ ವರ್ತನೆ ತೀರಾ ಕೆಟ್ಟದ್ದಾಗಿದ್ದು, ತಾವು ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಖುರ್ಷಿದ್ ಸುದ್ದಿವಾಹಿನಿವೊಂದಕ್ಕೆ ತಿಳಿಸಿದ್ದಾರೆ.ಖುರ್ಷಿದ್ ಅವರ ಪತ್ನಿ ಲೂಯಿಸ್ ಮತ್ತು ಸ್ವಯಂ ಸೇವಾ ಸಂಸ್ಥೆಯಾದ ಜಾಕಿರ್ ಹುಸೇನ್ ಸ್ಮಾರಕ ಟ್ರಸ್ಟ್‌ನ ವಕ್ತಾರರು ಕೇಜ್ರಿವಾಲ್ ಅವರ ಆಪಾದನೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅಂಗವಿಕಲರ ಕಲ್ಯಾಣಕ್ಕೆ ನೀಡಿರುವ ಹಣದ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆಪಾದನೆ ಸತ್ಯಕ್ಕೆ ದೂರವಾದುದು ಎಂದು ಲೂಯಿಸ್ ತಿಳಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್, ಹಿರಿಯ ವಕೀಲ ಶಾಂತಿಭೂಷಣ್ ಅವರು ಹಿಮಾಚಲ ಪ್ರದೇಶದಲ್ಲಿ ಚಹ ತೋಟ ಖರೀದಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.