ADVERTISEMENT

ಅರುಣಾ ಆಸ್ಪತ್ರೆಯಲ್ಲಿ ಸಿಹಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 18:00 IST
Last Updated 7 ಮಾರ್ಚ್ 2011, 18:00 IST

ಮುಂಬೈ (ಪಿಟಿಐ): ಸುಪ್ರೀಂ ಕೋರ್ಟ್‌ನ ತೀರ್ಪು ಹೊರಬೀಳುತ್ತಿದ್ದಂತೆಯೇ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಹಬ್ಬದ ವಾತಾವರಣ ನೆಲೆಸಿತು. ಅರುಣಾ ಅವರನ್ನು ಆರೈಕೆ ಮಾಡುತ್ತಿರುವ ಸಿಬ್ಬಂದಿ ಮಾತ್ರವಲ್ಲ, ಆಸ್ಪತ್ರೆಯ ಬಹುತೇಕ ಎಲ್ಲಾ ಸಿಬ್ಬಂದಿಯೂ ಸಂತೋಷದಿಂದ ಆಲಂಗಿಸಿಕೊಂಡು ಸಿಹಿ ಹಂಚಿದರು. ‘ಅರುಣಾ ಅವರನ್ನು ನಾವು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಿದ್ದೇವೆ. ಅವರು ನಮಗೆ ಯಾರಿಗೂ ಯಾವುದೇ ತೊಂದರೆ ಕೊಡುತ್ತಿಲ್ಲ. ಅವರ ಜೀವ ತೆಗೆಯುವ ಬಗ್ಗೆ ಯಾರಾದರೂ ಯೋಚಿಸುವುದಾದರೂ ಹೇಗೆ ಸಾಧ್ಯ’ ಎಂದು ಹಿರಿಯ ದಾದಿಯೊಬ್ಬರು ಪ್ರಶ್ನಿಸಿದರು.

‘ಪಿಂಕಿ ವಿರಾನಿ ಅವರು ದುಡ್ಡಿಗಾಗಿ ಈ ಅರ್ಜಿ ಸಲ್ಲಿಸಿದ್ದಾರೆ, ಅವರಿಗೆ ಬೇಕಿದ್ದರೆ ನಾವೇ ಚಂದಾ ಎತ್ತಿ ದುಡ್ಡು ನೀಡುತ್ತೇವೆ’ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದರು.ಆದರೆ ಮಂಬೈ ಜನತೆ ಮಾತ್ರ ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅರುಣಾಗೆ ಗೌರವಯುತವಾಗಿ ಸಾಯಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೋಟೆಲ್ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರನ್ನು ಮಾತನಾಡಿಸಿದಾಗ ಈ ಅಭಿಪ್ರಾಯ ವ್ಯಕ್ತವಾಯಿತು.

ವೈದ್ಯಕೀಯ ರಂಗದಿಂದಲೂ ಸ್ವಾಗತ
ಅರುಣಾಗೆ ದಯಾಮರಣ ಕರುಣಿಸದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮುಂಬೈಯ ಹಲವು ಪ್ರತಿಷ್ಠಿತ ಆಸ್ಟತ್ರೆಗಳ ವೈದ್ಯರು ಸ್ವಾಗತಿಸಿದ್ದಾರೆ.
ಅರುಣಾಗೆ ಸಹ್ಯ ದಯಾಮರಣ ನೀಡುವುದಕ್ಕೂ ತಮ್ಮ ವಿರೋಧವಿದೆ ಎಂದು ಹಲವು ವೈದ್ಯರು ಹೇಳಿದ್ದಾರೆ.
ನಾನಾ ರೀತಿಯಲ್ಲಿ ತೊಂದರೆಗೆ ಸಿಲುಕಿದ ಮತ್ತು ಮಿದುಳು ಸತ್ತವರಿಗೆ ಮಾತ್ರ ಸಹ್ಯ ದಯಾಮರಣ ನೀಡಬಹುದು ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಂಜಯ್ ಬುರ್ಡೆ ಹೇಳಿದರು. ಇನ್ನೊಬ್ಬರ ಜೀವ ತೆಗೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ಲೋಕಮಾನ್ಯ ತಿಲಕ್ ಜನರಲ್ ಆಸ್ಪತ್ರೆಯ ಡಾ. ನಿರಂಜನ್ ಚವಾಣ್ ಹೇಳಿದರು.

ಚರ್ಚೆ ನಡೆಯಲಿ-ಮೊಯಿಲಿ
ದಯಾಮರಣದ ಬಗ್ಗೆ ದೇಶದಲ್ಲಿ ಗಂಭೀರ ಚರ್ಚೆ ನಡೆಯಬೇಕು. ದಯಾಮರಣ ಸಂಬಂಧ ದೇಶದಲ್ಲಿ ಸದ್ಯ ಯಾವುದೇ ಕಾನೂನು ಇಲ್ಲವಾದ ಕಾರಣ ಇಂತಹ ಚರ್ಚೆ ಅಗತ್ಯ ಎಂದು ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಲಿ ಹೇಳಿದರು.ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿರ್ದಿಷ್ಟ ಕಾನೂನೊಂದು ಇಲ್ಲದಿದ್ದಾಗ ಇಂತಹ ವಿಚಾರದಲ್ಲಿ ನ್ಯಾಯಾಂಗ ಆದೇಶ ನೀಡುವುದು ಸೂಕ್ತವಲ್ಲ ಎಂಬ ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಸೂಕ್ತವಾಗಿದೆ ಎಂದರು. 

ADVERTISEMENT

ಏನಿದು  ದಯಾಮರಣ?
ದಯಾಮರಣದಲ್ಲಿ ಎರಡು ಬಗೆ. ಒಂದು ನಿಷ್ಕ್ರಿಯ ದಯಾಮರಣ (ಪ್ಯಾಸ್ಸೀವ್ ಯುಥನೇಸಿಯಾ) ಮತ್ತು ಇನ್ನೊಂದು ಸಕ್ರಿಯ ದಯಾಮರಣ (ಆ್ಯಕ್ಟೀವ್ ಯುಥನೇಸಿಯಾ).ಜೀವರಕ್ಷಕಗಳನ್ನು ತೆಗೆದು ಹಾಕಿ ಸಹಜವಾಗಿ ಸಾಯಲು ಬಿಡುವುದು ನಿಷ್ಕ್ರಿಯ ದಯಾಮರಣ. ಮರಣವನ್ನು ತರಿಸುವ ಚುಚ್ಚುಮದ್ದು ನೀಡಿ ರೋಗಿಯನ್ನು ಸಾಯುವಂತೆ ಮಾಡುವುದು ಸಕ್ರಿಯ ದಯಾಮರಣ. ಈ ಸಕ್ರಿಯ ದಯಾಮರಣ ಸಾಧ್ಯವೇ ಇಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿರುವ ಸುಪ್ರೀಂ ಕೋರ್ಟ್, ನಿಷ್ಕ್ರಿಯ ದಯಾಮರಣದತ್ತ ಒಲವು ತೋರಿಸಿದೆ. ಅದರ ತೀರ್ಪಿನ ಆಧಾರದಲ್ಲಿ ಕಾನೂನೊಂದು ರೂಪುಗೊಳ್ಳುತ್ತದೆಯೇ ಎಂಬ ಕುತೂಹಲ ಈಗ ನಿರ್ಮಾಣವಾಗಿದೆ.


ಕರುಣಾಜನಕ ಘಟನಾವಳಿ
* 1966: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಳದಿಪುರದ ಅರುಣಾ ರಾಮಚಂದ್ರ ಶಾನುಭಾಗ ದಾದಿಯಾಗಿ ಮುಂಬೈಯ ಕೆಇಎಂ ಆಸ್ಪತ್ರೆಗೆ ಸೇರ್ಪಡೆ.

* 1973, ನವೆಂಬರ್ 27: ಆಸ್ಪತ್ರೆಯ ಕಸ ಗುಡಿಸುವ ಸೋಹನ್‌ಲಾಲ್ ವಾಲ್ಮೀಕಿ ಅರುಣಾಳ ಮೇಲೆ ದೈಹಿಕ ಹಲ್ಲೆ  ನಡೆಸಿ, ಅತ್ಯಾಚಾರ ಎಸಗಿದ.

* 1974: ಕೊಲೆ ಪ್ರಯತ್ನ ಮತ್ತು ದರೋಡೆ ಯತ್ನದ ಆರೋಪದ ಮೇರೆಗೆ ಸೋಹನ್‌ಲಾಲ್‌ಗೆ ಏಳು ವರ್ಷಗಳ ಜೈಲು.

* 1998: ಜಸ್ಲೋಕ್ ಆಸ್ಪತ್ರೆಯಲ್ಲಿ ಎಂಆರ್‌ಐ ಪರೀಕ್ಷೆಗಾಗಿ ವರುಣಾ ಅವರನ್ನು ಸ್ಥಳಾಂತರಿಸುವಂತೆ ಕೋರಿದ್ದ ಪತ್ರಕರ್ತೆ ಪಿಂಕಿ ವಿರಾನಿ ಬೇಡಿಕೆಗೆ ಮನ್ನಣೆ. ಆದರೆ ಅರುಣಾಳ ಸಾವಿಗೆ ಇದು ಕಾರಣವಾದೀತು ಎಂಬ ಕಾರಣಕ್ಕೆ ಅನುಮತಿ ವಾಪಸ್ ಪಡೆದ ವೈದ್ಯರು. ಅದೇ ವರ್ಷ ಪಿಂಕಿ ಅವರಿಂದ ‘ಅರುಣಾಸ್ ಸ್ಟೋರಿ, ದಿ ಟ್ರೂ ಅಕೌಂಟ್ ಆಫ್ ಎ ರೇಪ್ ಆ್ಯಂಡ್ ಇಟ್ಸ್ ಆಫ್ಟರ್‌ಮಾಥ್’ ಪುಸ್ತಕ ಬಿಡುಗಡೆ.

* 2009, ಡಿಸೆಂಬರ್ 18: ಅರುಣಾ ಅವರಿಗೆ ದಯಾಮರಣ ಕರುಣಿಸಬೇಕು ಎಂದು ಕೋರಿ ಪಿಂಕಿ ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಿಂದ ಸ್ವೀಕಾರ.

* 2011, ಜನವರಿ 24: ಅರುಣಾ ಅವರನ್ನು ಕೂಲಂಕಷವಾಗಿ ಪರಿಶೀಲಿಸಿ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಲು ಮುಂಬೈಯ ಮೂವರು ಖ್ಯಾತ ವೈದ್ಯರಾದ ಜೆ.ವಿ.ದಿವಾಶಿಯಾ, ರೂಪಾ ಗುರ್ಶಾನಿ ಮತ್ತು ನೀಲೇಶ್ ಷಾ ಅವರ ತಂಡ ರಚನೆ. ಅದೇ ದಿನ ಅರುಣಾಗೆ ದಯಾಮರಣ ನೀಡುವುದನ್ನು ವಿರೋಧಿಸಿ ಕೆಇಎಂ ಆಸ್ಪತ್ರೆಯ ಡೀನ್ ಡಾ. ಸಂಜಯ್ ಓಕ್ ಅವರಿಂದ ಹೇಳಿಕೆ,.

* 2011, ಫೆಬ್ರುವರಿ 17: ವೈದ್ಯರ ತಂಡದಿಂದ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ.

* 2011, ಫೆಬ್ರುವರಿ 18: ಮಾರ್ಚ್ 2ರಂದು ಕೋರ್ಟ್ ಮುಂದೆ ಹಾಜರಾಗಿ ತಾಂತ್ರಿಕ ಅಂಶಗಳನ್ನು ಮತ್ತು ಅಭಿಪ್ರಾಯಗಳನ್ನು ತಿಳಿಸಲು ಈ ವೈದ್ಯರ ತಂಡಕ್ಕೆ ಕೋರ್ಟ್‌ನಿಂದ ನಿರ್ದೇಶನ.

* 2011, ಮಾರ್ಚ್ 2:  ಅರುಣಾ ದಯಾಮರಣ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್.

* 2011, ಮಾರ್ಚ್ 7: ಸುಪ್ರೀಂ ಕೋರ್ಟ್‌ನಿಂದ ಅರುಣಾ ದಯಾಮರಣ ಅರ್ಜಿ ತಿರಸ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.