ADVERTISEMENT

ಅಸಹಾಯಕ ಪ್ರಧಾನಿ: ಜೇಟ್ಲಿ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಈ ದೇಶದ ಸಮಸ್ಯೆಗಳನ್ನು ಅರಿತಿದ್ದಾರೆ. ಅದಕ್ಕೆ ಪರಿಹಾರವೂ ಅವರಿಗೆ ಗೊತ್ತಿದೆ. ಆದರೆ, ಸರ್ಕಾರದ ನಾಯಕನಿಗೇ ಅಧಿಕಾರ ಇಲ್ಲದ ಯುಪಿಎ ಮಾದರಿಯ ಆಡಳಿತದಿಂದಾಗಿ ಅವರ ಕೈಕಟ್ಟಿಹಾಕಿದಂತಾಗಿದೆ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟದ ಸಭೆಯಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಸಿಂಗ್ ಇದೇ ವೇದಿಕೆಯಲ್ಲಿ ಮಾಡಿದ ಭಾಷಣ ನೆನಪಿಸಿಕೊಂಡರು.

`ಅವರ (ಸಿಂಗ್) ಬುದ್ಧಿಮತ್ತೆಯ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಸಮಸ್ಯೆ ಏನು ಎಂಬುದು ಅವರಿಗೆ ಗೊತ್ತಿತ್ತು. ಅದನ್ನು ಪರಿಹರಿಸುವ ಮಾರ್ಗಗಳು ಅವರ ಬಳಿ ಇದ್ದವು. ಆದರೆ, ಅವರ ಬಳಿ ಅಧಿಕಾರ ಇಲ್ಲದೇ ಇರುವುದರಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ' ಎಂದರು.

`ಪ್ರಜಾಪ್ರಭುತ್ವದಲ್ಲಿ ನಾಯಕನ ಮಾತೇ ಅಂತಿಮವಾಗಬೇಕು. ಆದರೆ, ದುರದೃಷ್ಟವಶಾತ್ ಈ ಸರ್ಕಾರದಲ್ಲಿ ಚುನಾಯಿತ ನಾಯಕನಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ' ಎಂದು ಜೇಟ್ಲಿ ಅವರು ಸರ್ಕಾರದ ವ್ಯವಹಾರಗಳಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಡುತ್ತಿರುವ ಹಸ್ತಕ್ಷೇಪದ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.

ಕಾಂಗ್ರೆಸ್ ಪಕ್ಷದ ನಾಯಕಿ ನಿರ್ಧಾರ ತೆಗೆದುಕೊಳ್ಳತ್ತಿರುವುದರಿಂದ ಆಡಳಿತ ವ್ಯವಸ್ಥೆ ಕುಂಟುತ್ತ ಸಾಗಿದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.