ADVERTISEMENT

ಅಸಾರಾಂ ಪುತ್ರನ ಬಂಧನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ನವದೆಹಲಿ/ಸೂರತ್‌ (ಪಿಟಿಐ): ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಪುತ್ರ ನಾರಾಯಣ್‌ ಸಾಯಿಯನ್ನು (41) ಬುಧವಾರ ಬಂಧಿಸಲಾಗಿದೆ. 58 ದಿನಗಳಿಂದ ತಲೆಮರೆಸಿ­ಕೊಂಡಿದ್ದ ಸಾಯಿಯನ್ನು ದೆಹಲಿ– ಹರಿಯಾಣ ಗಡಿಯಲ್ಲಿ ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸಾಯಿ ಹಿಂಬಾ­ಲಕರಾದ ಭವಿಕಾ, ವಿಷ್ಣು, ರಮೇಶ್‌ ಮಲ್ಹೋತ್ರಾ ಹಾಗೂ ಕೌಶಲ್‌ ಕುಮಾರ್‌ ಅಲಿಯಾಸ್‌ ಹನುಮಾನ್‌ ಎಂಬು­ವ­ರನ್ನೂ ಬಂಧಿಸಲಾಗಿದೆ.

ಬಂಧನದ ಸಮಯದಲ್ಲಿ ಸಾಯಿ, ಸಿಖ್‌ ಪುರುಷನಂತೆ ತಲೆಗೆ ಮುಂಡಾಸು ಸುತ್ತಿಕೊಂಡು ವೇಷ ಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ತಲೆತಪ್ಪಿಸಿಕೊಂಡಿದ್ದ ಸಾಯಿ ಬಗ್ಗೆ ಸುಳಿವು ನೀಡಿದವರಿಗೆ ₨5 ಲಕ್ಷ ಬಹು­ಮಾನ ಘೋಷಿಸಲಾಗಿತ್ತು. 

ಹಿನ್ನೆಲೆ: ಅಸಾರಾಂ ಮತ್ತು ಸಾಯಿ ವಿರುದ್ಧ  ಅವರ ಆಶ್ರಮದಲ್ಲಿದ್ದ ಸೂರತ್‌ ಮೂಲದ ಇಬ್ಬರು ಸಹೋದರಿಯರು ದೂರು ನೀಡಿದ್ದರು. ಇದರ ಅನ್ವಯ ಅತ್ಯಾಚಾರ, ಲೈಂಗಿಕ ಹಿಂಸೆ, ಕಾನೂನು­ಬಾಹಿರವಾಗಿ ವಶದಲ್ಲಿ ಇರಿಸಿಕೊಂಡಿದ್ದ ಆಪಾದನೆ ಮೇಲೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಯಿ ವಿರುದ್ಧ ದೂರು ನೀಡಿರುವ ಕಿರಿಯ ಸೋದರಿ, 2002ರಿಂದ 2005­ರ­ವರೆಗೆ ಪದೇ ಪದೇ ಅತ್ಯಾಚಾರ ಮತ್ತು ಲೈಂಗಿಕ ಹಿಂಸೆ ನೀಡಿದ್ದರು ಎಂದು ಆಪಾದಿಸಿದ್ದಾರೆ.

ಅಸಾರಾಂ ವಿರುದ್ಧ ದೂರು ನೀಡಿ­ರುವ ಹಿರಿಯ ಸೋದರಿ, ಅಹಮದಾ­ಬಾದ್‌ ಹೊರವಲಯದಲ್ಲಿರುವ ಆಶ್ರಮ­­ದಲ್ಲಿದ್ದಾಗ 1997ರಿಂದ 2006ರವರೆಗೆ ಅಸಾರಾಂ ಅತ್ಯಾಚಾರ ಎಸಗಿ; ಲೈಂಗಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ­ಯಲ್ಲಿ ಅಸಾರಾಂ ಅವರನ್ನು ಸೆಪ್ಟೆಂಬರ್‌­ನಲ್ಲೇ ಬಂಧಿಸಲಾಗಿದ್ದು, ಸದ್ಯ ಅವರು ಜೋಧಪುರದ ಜೈಲಿನಲ್ಲಿದ್ದಾರೆ.

ಒಂದು ದಿನ ಮಟ್ಟಿಗೆ ಆರೋಪಿ ಕರೆದೊಯ್ಯಲು ಅನುಮತಿ (ಐಎಎನ್‌ಎಸ್‌ ವರದಿ): ದೆಹಲಿ ಪೊಲೀಸರು ಬಂಧಿಸಿರುವ ನಾರಾ­ಯಣ್‌ ಸಾಯಿಯನ್ನು ಒಂದು ದಿನದ ಮಟ್ಟಿಗೆ ಕರೆದೊಯ್ಯಲು ಗುಜರಾತ್‌ ಪೊಲೀಸರಿಗೆ ಇಲ್ಲಿನ ಮೆಟ್ರೊಪಾಲಿಟನ್‌ ನ್ಯಾಯಾಲಯವು ಬುಧವಾರ ಅನು­ಮತಿ ನೀಡಿದೆ. ಸಾಯಿ ಜೊತೆಗೆ ಬಂಧಿತರಾಗಿರುವ ಕೌಶಲ್‌ ಕುಮಾರ್‌ ಮತ್ತು ಚಾಲಕ ರಮೇಶ್‌ ಮಲ್ಹೋತ್ರಾ ಅವರನ್ನೂ ಒಂದು ದಿನ ಮಟ್ಟಿಗೆ ಕರೆದೊಯ್ಯಲು ಸಮ್ಮತಿಸಿದೆ.

ಆರೋಪಿ ಸಾಯಿ ಬಂಧನಕ್ಕೆ  ಸೂರತ್‌ ಕೋರ್ಟ್‌ ಜಾಮೀನು ರಹಿತ ವಾರೆಂಟ್‌ ಹೊರಡಿಸಿರುವ ಕಾರಣ ಆತ­ನನ್ನು ಅಲ್ಲಿಗೆ ಹಾಜರು ಪಡೆಸಬೇಕಿದೆ. ಆದ್ದರಿಂದ ಆತನನ್ನು  ಕರೆದೊಯ್ಯಲು ಅನು­ಮತಿ ನೀಡಬೇಕು ಎಂದು ಗುಜ­ರಾತ್‌ ಪೊಲೀಸರು ಕೋರಿದ್ದರು.

ಬೆಂಬಲಿಗರು– ಪ್ರತಿಭಟನಾಕಾರರ ಮಧ್ಯೆ ಘರ್ಷಣೆ
ನವದೆಹಲಿಯ ರೋಹಿನಿಯಲ್ಲಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಮುಂದೆ ನಾರಾಯಣ್‌ ಸಾಯಿ ವಿರುದ್ಧ  ಪ್ರತಿಭಟನೆ ಮಾಡುತ್ತಿದ್ದ ಗುಂಪು ಮತ್ತು ಸಾಯಿ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿದೆ. ಸಾಯಿ ಅವರನ್ನು ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೋಲಿಸರು ಕರೆದೊಯ್ದರು.

ADVERTISEMENT

ಈ ಸಂದರ್ಭ­ದಲ್ಲಿ ಪ್ರತಿಭಟನಾಕಾರರ ಒಂದು ಗುಂಪು ಸಾಯಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಘೋಷಣೆಗಳನ್ನು ಕೂಗುತ್ತಿತ್ತು. ಆಗ ಸಾಯಿ ಅವರ ಕೆಲ ಮಹಿಳಾ ಬೆಂಬಲಿಗರು ಆ ಗುಂಪಿನ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದರು. ಕೂಡಲೇ ಪೋಲಿಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ­ಯನ್ನು ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.