ADVERTISEMENT

ಅಸಾರಾಮ್ ಅರ್ಜಿ ವಿಚಾರಣೆ ಇಂದು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಜೋಧಪುರ (ಐಎಎನ್‌ಎಸ್): ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ರಾಜಸ್ತಾನ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಬುಧವಾರಕ್ಕೆ (ಸೆ. 4ಕ್ಕೆ) ಮುಂದೂಡಿದೆ.

ಜಾಮೀನು ಅರ್ಜಿ ಸಂಬಂಧ ಸರ್ಕಾರದ ವಕೀಲರಿಗೆ ವಾದ ನಡೆಸಲು ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಜೋಧಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮನೋಜ್ ವ್ಯಾಸ್ ಅವರು ವಿಚಾರಣೆಯನ್ನು ಒಂದು ದಿನ ಮುಂದೂಡಿದ್ದಾರೆ ಎಂದು ಅಸಾರಾಮ್ ಪರ ವಕೀಲ ಕೆ.ಕೆ. ಮನ್ನನ್ ತಿಳಿಸಿದ್ದಾರೆ.

ಶನಿವಾರ ಮಧ್ಯರಾತ್ರಿ ಮಧ್ಯ ಪ್ರದೇಶದ ಇಂದೋರ್ ಆಶ್ರಮದಲ್ಲಿ ಅಸಾರಾಮ್ ಬಾಪು ಅವರನ್ನು ರಾಜಸ್ತಾನದ ಪೊಲೀಸರು ಬಂಧಿಸಿದ್ದರು. ಜೋಧಪುರದ ಸ್ಥಳೀಯ ನ್ಯಾಯಾಲಯವು ಸೋಮವಾರ, ಬಾಪು ಅವರನ್ನು ಸೆಪ್ಟೆಂಬರ್ 15ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬಾಪು ಅವರಿಗೆ ಜೋಧಪುರದ ಕೇಂದ್ರ ಕಾರಾಗೃಹದ ಒಂದನೇ ನಂಬರ್ ಬ್ಯಾರಕ್‌ನಲ್ಲಿ ಇಡಲಾಗಿದೆ.

`ಬಾಪು ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತಪ್ಪು ಮಾಡಿದ್ದಾರೆ. ಈ ಪ್ರಕರಣದಡಿ ಆರೋಪಿಗೆ ಜಾಮೀನು ಸಿಗುವುದಿಲ್ಲ. ಆದರೆ, ಬಾಪು ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಾಲಕಿ ವಿವರಿಸಿದ್ದಾಳೆ. ಈ ಆರೋಪದಡಿ ಜಾಮೀನು ನೀಡಬಹುದು. ಬಾಲಕಿಯ ವೈದ್ಯಕೀಯ ವರದಿ ಅತ್ಯಾಚಾರ ನಡೆದಿದ್ದನ್ನು ದೃಢಪಡಿಸುವುದಿಲ್ಲ' ಎಂದು ಅಸಾರಾಮ್ ವಕೀಲ ಮನ್ನನ್ ನ್ಯಾಯಾಲಯಲ್ಲಿ ವಾದ ಮಂಡಿಸಿದ್ದಾರೆ.

`ಸುಪ್ರೀಂ' ತರಾಟೆ”:
ನವದೆಹಲಿ (ಐಎಎನ್‌ಎಸ್): ಅಸಾರಾಮ್ ಬಾಪು ಅವರಿಗೆ ಅನಗತ್ಯವಾಗಿ ಭಾರಿ ಭದ್ರತೆ ಒದಗಿಸಿರುವ ಸರ್ಕಾರವನ್ನು ಸುಪ್ರೀಂಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

`ಒಬ್ಬ ಆರೋಪಿಯ ಸುತ್ತ ಅಷ್ಟೊಂದು ಭಾರಿ ಪ್ರಮಾಣದಲ್ಲಿ ಭದ್ರತೆ ಒದಗಿಸಿದ್ದನ್ನು ಟಿ.ವಿಯಲ್ಲಿ ನೋಡಿದ್ದೇವೆ' ಎಂದು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ವಿ. ಗೋಪಾಲಗೌಡ ಅವರು ತಿಳಿಸಿದ್ದಾರೆ.

`ಇದು ವಿಶಿಷ್ಟ ಪ್ರಕರಣ ಎಂದು ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಆದರೆ, ಇತ್ತೀಚೆಗೆ ಅದೊಂದು ನಿಯಮದಂತೆ ಆಗು' ಎಂದು ನ್ಯಾಯಮೂರ್ತಿ ಸಿಂಘ್ವಿ ಅವರು ಹೇಳಿದ್ದಾರೆ.

ಅಂತಸ್ತಿನ ಪ್ರತೀಕ ಎಂದು ಭಾವಿಸಿ ಅರ್ಹರಲ್ಲದವರಿಗೆ ಕಲ್ಪಿಸಿರುವ ಭದ್ರತೆಯನ್ನು ವಾಪಸ್ ಪಡೆದುಕೊಳ್ಳಬೇಕೆಂದು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಾಪು ಬೆಂಬಲಿಗರ ಪ್ರತಿಭಟನೆ:
ಜಮ್ಮು (ಪಿಟಿಐ):
ಅಸಾರಾಮ್ ಬಾಪು ಅವರ ಬೆಂಬಲಿಗರು ಮಂಗಳವಾರ ಸಾಂಬಾ ಜಿಲ್ಲೆಯಿಂದ ಹಾಯ್ದು ಹೋಗಿರುವ ಹಳಿ ಮೇಲೆ ಪ್ರತಿಭಟನೆ ನಡೆಸಿದ ಕಾರಣ ಜಮ್ಮು ಮತ್ತು ಪಠಾಣ್‌ಕೋಟ್ ನಡುವಿನ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಹಿಳೆಯರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನರು ಸಾಂಬಾದ ಬರಿ ಬ್ರಾಹ್ಮಣದ ಬಲೋಲ್ ನಲ್ಲಾ ಪ್ರದೇಶದಲ್ಲಿ ಹಳಿ ಮೇಲೆ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟಿಸಿದರು.

ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲಿ'
ಕೋಟಾ/ರಾಜಸ್ತಾನ (ಪಿಟಿಐ):
ಅಸಾರಾಮ್ ಬಾಪು ಅವರು ತಾವು ನಿರ್ದೋಷಿ ಎಂದು ಸಾಬೀತುಪಡಿಸಲು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಬೇಕು ಎಂದು ರಾಜಸ್ತಾನದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರೊ. ಲಾಡಕುಮಾರಿ ಜೈನ್ ಆಗ್ರಹಿಸಿದ್ದಾರೆ.

`ಬಾಪು ಅವರು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಿ ಈ ಪ್ರಕರಣದಲ್ಲಿ ತಾವು ನಿರ್ದೋಷಿ ಎಂಬುದನ್ನು ಸಾಬೀಪಡಿಸಬೇಕು' ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.