ADVERTISEMENT

ಅಸೀಮಾನಂದ ತಪ್ಪೊಪ್ಪಿಗೆ ಪ್ರಶ್ನಿಸಿದ ಆರ್‌ಎಸ್‌ಎಸ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ನವದೆಹಲಿ (ಪಿಟಿಐ): ಭಯೋತ್ಪಾದನಾ ಪ್ರಕರಣಗಳ ತನಿಖೆಯಲ್ಲಿ ತನಿಖಾ ಸಂಸ್ಥೆಗಳ ಪಾತ್ರಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪ್ರಶ್ನಿಸಿದೆ. ಹಿಂದೂ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿರುವ  ಆರೋಪದಲ್ಲಿ ಬಂಧಿತರಾದವರು ಮಾತ್ರ ವಿಚಾರಣೆ ವೇಳೆ ತಪ್ಪೊಪ್ಪಿಕೊಳ್ಳುತ್ತಿದ್ದಾರೆ. ಆದರೆ ಶಿಕ್ಷೆಗೆ ಗುರಿಯಾಗಿರುವ ಅಜ್ಮಲ್ ಕಸಾಬ್, ಅಫ್ಜಲ್ ಗುರು ಸೇರಿದಂತೆ ಇತರ ಉಗ್ರರು ತಾವು ನಡೆಸಿರುವ ಅಪರಾಧಗಳ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿರುವ ಆರ್‌ಎಸ್‌ಎಸ್, ಇದರಲ್ಲಿ ಸಂಚು ಇದ್ದಂತೆ ಅನಿಸುತ್ತದೆ ಎಂಬುದಾಗಿ ತನ್ನ ಮುಖವಾಣಿ ‘ಆರ್ಗನೈಸರ್’ನ ಸಂಪಾದಕೀಯದಲ್ಲಿ ಬರೆದಿದೆ.

2007ರಲ್ಲಿ ನಡೆದ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದ ತಪ್ಪೊಪ್ಪಿಕೊಂಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಆರ್‌ಎಸ್‌ಎಸ್ ಈ ರೀತಿ ಹೇಳಿದೆ.
‘ಒಂದು ವೇಳೆ ತನಿಖಾ ಸಂಸ್ಥೆಗಳಿಗೆ ಈ ಪ್ರಕರಣಗಳ ಹಿಂದಿನ ಕಾರಣಗಳನ್ನು ನಿಜವಾಗಿಯೂ ಪತ್ತೆ ಮಾಡಬೇಕೆಂದಿದ್ದರೆ, ತಪ್ಪೊಪ್ಪಿಗೆ ವಿಚಾರವನ್ನು ಇಷ್ಟು ದೊಡ್ಡ ರೀತಿಯಲ್ಲಿ ವ್ಯವಸ್ಥಿತವಾಗಿ ಪ್ರಚಾರಮಾಡುವ ಅಗತ್ಯವಿರಲಿಲ್ಲ’ ಎಂದು ಹೇಳಿದೆ. ಅಸೀಮಾನಂದ ತಪ್ಪೊಪ್ಪಿಕೊಂಡಿರುವ ಮಾಹಿತಿ ಸೋರಿಕೆಯು ರಾಜಕೀಯ ಪ್ರೇರಿತವಾದುದು ಎಂದಿರುವ ಆರ್‌ಎಸ್‌ಎಸ್, ‘ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವ ಮೊದಲು, ಮೆಕ್ಕಾ ಮಸೀದಿ ಸ್ಫೋಟದ ಹಿಂದೆ ನಿಷೇಧಿತ ಸಂಘಟನೆ ಹುಜಿಯ ಕೈವಾಡವಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದರು’ ಎಂದು ಹೇಳಿದೆ. ಆರ್‌ಎಸ್‌ಎಸ್ ಸಂಪಾದಕೀಯದಲ್ಲಿ ಬರೆದಿದೆ.

ಅಸೀಮಾನಂದ ಅವರು ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ಗುಜರಾತ್‌ನಡಂಗ್ಸ್‌ನ ಶಬರಿ ಧಾಮದಲ್ಲಿರುವ ವನ ವಾಸಿ ಕಲ್ಯಾಣ ಆಶ್ರಮದ ಮುಖ್ಯಸ್ಥರಾಗಿದ್ದರು. ಭಯೋತ್ಪಾದಕರಿಗೆ ದಾಳಿ ನಡೆಸಲು ಮಾರ್ಗದರ್ಶನ ನೀಡಿರುವುದಾಗಿ ಮತ್ತು ಗುಜರಾತ್‌ನ ಡಾಂಗ್ಸ್ ಮತ್ತು ವಸ್ಲಾಡ್‌ನಲ್ಲಿ ನಡೆದಿರುವ ಭಯೋತ್ಪಾದನಾ ಸಮಾಲೋಚನಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಸ್ವಾಮಿ ಅಸೀಮಾನಂದ ಇತ್ತೀಚೆಗೆ ತಪ್ಪೊಪ್ಪಿಕೊಂಡಿದ್ದರು.

ADVERTISEMENT

ಅಲ್ಲದೇ ಮಾಲೆಗಾಂವ್, ಅಜ್ಮೀರ್ ಶರೀಫ್ ಮತ್ತು ಹೈದರಾಬಾದ್‌ಗಳನ್ನು ಭಯೋತ್ಪಾದನಾ ದಾಳಿಯ ಗುರಿಗಳನ್ನಾಗಿ ಅಸೀಮಾನಂದ ಆಯ್ಕೆ ಮಾಡಿದ್ದರು ಎಂಬುದೂ ವಿಚಾರಣೆಯಿಂದ ತಿಳಿದು ಬಂದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.