ADVERTISEMENT

ಅಸ್ಸಾಂನಿಂದ ಸ್ವಾಯತ್ತತೆಯ ಪಾಠ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST
ಅಸ್ಸಾಂನಿಂದ ಸ್ವಾಯತ್ತತೆಯ ಪಾಠ
ಅಸ್ಸಾಂನಿಂದ ಸ್ವಾಯತ್ತತೆಯ ಪಾಠ   

ಗುವಾಹಟಿ: ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಅಸ್ಸಾಂನಿಂದ ಮೂರು ಭಾಗಗಳು ಸಿಡಿದುಹೋಗಿ ನಾಗಲ್ಯಾಂಡ್, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳೆಂಬ ಪ್ರತ್ಯೇಕ ರಾಜ್ಯಗಳಾಗಿವೆ. ಈಗ ರಾಜ್ಯದೊಳಗೆ ಬೋಡೊ ಪ್ರಾಂತೀಯ ಸ್ವಾಯತ್ತ ಜಿಲ್ಲೆಯ ಜತೆಯಲ್ಲಿ ಮಿಶಿಂಗ್, ರಾಭಾ ಮತ್ತು ತಿವಾ ಎಂಬ ಮೂರು ಬಯಲುಪ್ರದೇಶದ ಗುಡ್ಡಗಾಡು ಸಮುದಾಯಗಳಿಗಾಗಿ ಸ್ವಾಯತ್ತ ಮಂಡಳಿಗಳಿವೆ.  ಬೋಡೊಗಳು ಈಗ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುತ್ತಿದ್ದರೆ ಇವರಿಗಿಂತ ಮೊದಲೇ ಸ್ವಾಯತ್ತ ಮಂಡಳಿಯನ್ನು ಪಡೆದಿದ್ದ ಉಳಿದ ಮೂರು ಸಮುದಾಯಗಳು `ಪ್ರಾಂತೀಯ ಮಂಡಳಿ~ಯ ಸ್ಥಾನಮಾನ ನೀಡಬೇಕೆಂದಯ ಕೇಳುತ್ತಿವೆ. ಸ್ವಾಯತ್ತತೆಯ ಹೋರಾಟ ಇಲ್ಲಿಗೆ ನಿಂತಿಲ್ಲ. ಇದರಿಂದ ಸ್ಪೂರ್ತಿ ಪಡೆದು ರಾಜ್ಯದಲ್ಲಿರುವ ಇತರ ಬುಡಕಟ್ಟು ಜನಾಂಗಗಳು ಕೂಡಾ ಸ್ವಾಯತ್ತ ಮಂಡಳಿಗಾಗಿ ಬೇಡಿಕೆ ಸಲ್ಲಿಸಿವೆ. ಅಸ್ಸಾಂ ಇನ್ನೆಷ್ಟು ಹೋಳುಗಳಾಗಲಿವೆಯೋ ಗೊತ್ತಿಲ್ಲ.

ಸ್ವಾಯತ್ತ ಮಂಡಳಿಗಳು: ದೇಶದ ಆರು ರಾಜ್ಯಗಳಾದ ಅಸ್ಸಾಂ, ಜಮ್ಮು ಮತ್ತು ಕಾಶ್ಮೆರ, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ಪಶ್ಚಿಮಬಂಗಾಳಗಳಲ್ಲಿ ಈಗ ಸಂವಿಧಾನದ ಆರನೇ ಶೆಡ್ಯೂಲ್‌ಗೆ ಸೇರಿರುವ ಹದಿಮೂರು `ಬುಡಕಟ್ಟು ಜನಾಂಗಗಳ ಸ್ವಾಯತ್ತ ಮಂಡಳಿ~ಗಳಿವೆ. ಸಂವಿಧಾನದ 6ನೇ ಶೆಡ್ಯೂಲ್‌ಗೆ ಸೇರಿರುವ ಕರ್ನಾಟಕದ ಕೊಡವರು ಸೇರಿದಂತೆ ಬುಡಕಟ್ಟು ಗಂಪಿಗೆ ಸೇರಿದವರೆಂದು ಹೇಳಿಕೊಳ್ಳುತ್ತಿರುವ ದೇಶದಲ್ಲಿರುವ ಇನ್ನು ಅನೇಕ ಜನಾಂಗಗಳು ಸ್ವಾಯತ್ತ ಮಂಡಳಿ ಪಡೆಯಲು ಸಾಲಿನಲ್ಲಿ ನಿಂತಿವೆ.

ಸ್ವಾಯತ್ತ ಸ್ಥಾನಮಾನ ಸಿಕ್ಕಿದೆ. ಕೂಡಲೇ ತಮ್ಮ ಭಾಗ್ಯದ ಬಾಗಿಲು ತೆರೆಯಲಿದೆ ಎಂಬ ನಿರೀಕ್ಷೆಯಲ್ಲಿರುವ ಇವರೆಲ್ಲ ಒಮ್ಮೆ ಬೋಡೊಲ್ಯಾಂಡ್ ಪ್ರಾಂತೀಯ ಸ್ವಾಯತ್ತ ಜಿಲ್ಲೆ (ಬಿಟಿಎಡಿ)ಗೆ ಭೇಟಿ ನೀಡಬೇಕು.

`ಅಸ್ಸಾಂ ರಾಜ್ಯವನ್ನು ವಿಭಜಿಸಿ~ ಎಂಬ ಘೋಷಣೆಯೊಂದಿಗೆ ಪ್ರತ್ಯೇಕ ರಾಜ್ಯದ ಹೋರಾಟವನ್ನು ಪ್ರಾರಂಭಿಸಿದ್ದ ಬೋಡೊಗಳು  1993ರಲ್ಲಿ ಸ್ವಾಯತ್ತ ಮಂಡಳಿಗಷ್ಟೇ ತೃಪ್ತರಾಗಬೇಕಾಯಿತು.   ಪ್ರಾಂತೀಯ ಸ್ವಾಯತ್ತ ಜಿಲ್ಲೆಯ ಸ್ಥಾನಮಾನವನ್ನು ಪಡೆಯಲು ಬೋಡೊಗಳು ಮತ್ತೆ ಹತ್ತುವರ್ಷ ಕಾಯಬೇಕಾಯಿತು. ಇದರ ನಂತರ ನೆರೆಯ ಏಳೆಂಟು ಜಿಲ್ಲೆಗಳ ಒಂದಷ್ಟು ಭಾಗಗಳನ್ನು ಸೇರಿಸಿ ಕೊಕರ್‌ಝಾರ್, ಬಕ್ಸಾ, ಚಿರಾಂಗ್ ಮತ್ತು ಉದಲ್‌ಗುರಿ ಎಂಬ ನಾಲ್ಕು ಜಿಲ್ಲೆಗಳನ್ನು ರಚಿಸಿ `ಬಿಟಿಎಡಿ~ ಮಾಡಲಾಗಿದೆ. ಅದರ ನಂತರ ಒಂಬತ್ತು  ವರ್ಷಗಳಾದರೂ ಇದರ ಗಡಿರೇಖೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಬಿಟಿಎಡಿ ಸೇರಿಸಲಾಗಿರುವ ಅನೇಕ ಹಳ್ಳಿಗಳು ಹೊರಬರಲು ಪ್ರಯತ್ನ ನಡೆಸುತ್ತಲೇ ಇದೆ. ಇದರಿಂದಾಗಿ `ಗಡಿಘರ್ಷಣೆ~ ಸಾಮಾನ್ಯವಾಗಿದೆ. `ಕೇವಲ 39 ಸರ್ಕಾರಿ ಇಲಾಖೆಗಳನ್ನು ಮಾತ್ರ ಸೇರಿಸಿರುವುದರಿಂದ ಇಡೀ ಬಿಟಿಎಡಿ `ಆಧಾ ಸರ್ಕಾರ್~ ಆಗಿಹೋಗಿದೆ~ ಎಂದು ಸರ್ಕಾರಿ ಅಧಿಕಾರಿಗಳೊಬ್ಬರು ಹೇಳಿದರು.

`ನಮ್ಮ ತಪ್ಪು ಏನೆಂಬುದು ಅರಿವಾಗಿದೆ. ರಾಜ್ಯ ರಚನೆಯ ಬೇಡಿಕೆಯನ್ನು ಕೈಬಿಟ್ಟು ಸ್ವಾಯತ್ತ ಮಂಡಳಿಗೆ ಒಪ್ಪಿಕೊಳ್ಳಬಾರದಿತ್ತು. ಗೃಹ ಇಲಾಖೆ ಬಿಟಿಎಡಿಯಡಿ ಇಲ್ಲದೆ ಇರುವ ಪರಿಣಾಮ ಏನೆಂಬುದು ಈಗಿನ ಗಲಭೆಯ ಸಮಯದಲ್ಲಿ ಗೊತ್ತಾಗಿದೆ. ಪೊಲೀಸರ ಎದುರಲ್ಲೇ ಬೋಡೊಗಳ ಮೇಲೆ ದಾಳಿ ನಡೆಸಲಾಗಿದೆ. ಪೊಲೀಸ್ ಅಧಿಕಾರಿಗಳು ಗುವಾಹಟಿಯಿಂದಲೇ ಆದೇಶ ಪಡೆಯುತ್ತಿರುವುದರಿಂದ ಬಿಟಿಎಡಿ ಏನೂ ಮಾಡಲಾಗದೆ ನಿಷ್ಕ್ರೀಯವಾಗಿತ್ತು. ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟವನ್ನು ಪ್ರಾರಂಭಿಸಲಾಗುವುದು~ ಎಂದು ಅಖಿಲ ಬೋಡೊ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಿರೊನಿ ಬಸುಮತಾರಿ ಹೇಳುತ್ತಾರೆ.

`ಮಿಶಿಂಗ್, ರಾಭಾ ಮತ್ತು ತಿವಾ ಸ್ವಾಯತ್ತ ಮಂಡಳಿಗಳ ಸ್ಥಿತಿಯೇನು ಇದಕ್ಕಿಂತ ಭಿನ್ನವಾಗಿಲ್ಲ. ಇವುಗಳ ಗಡಿಪ್ರದೇಶವನ್ನೂ ಗುರುತಿಸಲಾಗಿಲ್ಲ, ರಾಜ್ಯ ಸರ್ಕಾರದಿಂದ ಬರುವ ಅನುದಾನ ಅಧಿಕಾರಿಗಳಿಗೆ ಸಂಬಳ ಕೊಡಲು ಸಾಕಾಗುವುದಿಲ್ಲ. ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಸ್ವಾಯತ್ತ ಮಂಡಳಿಗಳಿರುವ ಕಡೆಗಳಲ್ಲಿ ಪಂಚಾಯತ್ ವ್ಯವಸ್ಥೆಯೇ ಇಲ್ಲದಂತಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರದಿಂದ ಪಂಚಾಯತ್‌ಗಳಿಗೆ ನೇರವಾಗಿ ಬರುವ ಹಣದಿಂದ ಈ ಸ್ವಾಯತ್ತ ಮಂಡಳಿಗಳು ವಂಚಿತವಾಗಿವೆ~ ಎಂದು ದೂರುತ್ತಲೇ ಹೋದರು ಬಸುಮತಾರಿ. ಇದರ ಪರಿಣಾಮ ಬಿಟಿಎಡಿಯ ಕೇಂದ್ರ ಸ್ಥಾನವಾದ ಕೊಕರ್‌ಝಾರ್‌ನಲ್ಲಿಯೇ ಕಾಣಬಹುದು. ಗುಂಡಿಬಿದ್ದ ರಸ್ತೆಗಳು, ಕಣ್ಣುಮುಚ್ಚಾಲೆ ಆಡುತ್ತಿರುವ ವಿದ್ಯುತ್, ಪಾಳು ಬಿದ್ದ ಶಾಲೆ-ಆಸ್ಪತ್ರೆಗಳು...ಅಭಿವೃದ್ಧಿಯ ಯಾವ ಕುರುಹುಗಳೂ ಇಲ್ಲಿ ಕಾಣುತ್ತಿಲ್ಲ.

ಒಪ್ಪಂದಕ್ಕೆ ಅಪಸ್ವರ:ಬೋಡೊ ಪ್ರಾಂತೀಯ ಸ್ವಾಯತ್ತ ಜಿಲ್ಲೆಯ ಸ್ಥಾಪನೆಗಾಗಿ ಆಗಿನ ಕೇಂದ್ರ ಗೃಹಸಚಿವ ಎಲ್.ಕೆ.ಅಡ್ವಾಣಿ, ಮುಖ್ಯಮಂತ್ರಿ ತರುಣ್ ಗೊಗೊಯ್ ಮತ್ತು ಬೋಡೋ ಲಿಬರೇಷನ್ ಟೈಗರ್ ನಾಯಕ ಹಗ್ರಾಮಾ ಬಸುಮತಾರಿ ನಡುವೆ ಒಪ್ಪಂದ ನಡೆದಾಗಲೇ ಅಪಸ್ವರ ಕೇಳಿಬಂದಿತ್ತು.

ಇದಕ್ಕೆ ಐತಿಹಾಸಿಕ ಅಸ್ಸಾಂ ಒಪ್ಪಂದದ ವೈಫಲ್ಯ  ಮಾತ್ರ ಕಾರಣ ಅಲ್ಲ, ತ್ರಿಪುರ (1988) ಮತ್ತು ಮಿಜೋರಾಂ ಒಪ್ಪಂದ (1986)ಗಳು ಕೂಡಾ ಯಶಸ್ವಿಯಾಗಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳು ಈ ಒಪ್ಪಂದಗಳನ್ನು ಜಾರಿಗೆ ತರುವ ಪ್ರಯತ್ನವನ್ನೇ ಮಾಡದಿರುವುದು ಇದಕ್ಕೆ ಕಾರಣ.

ಅಸ್ಸಾಂ ಸರ್ಕಾರದ ಸಮಸ್ಯೆ ಇಲ್ಲಿಗೆ ಕೊನೆಗೊಂಡಿಲ್ಲ. ರಾಜ್ಯದಲ್ಲಿರುವ ಇತರ 18-19 ಬುಡಕಟ್ಟು ಜನಾಂಗಗಳು ಕೂಡಾ ಈಗ ಸ್ವಾಯತ್ತ ಮಂಡಳಿ ಬೇಕೆಂದು ಕೇಳತೊಡಗಿವೆ. ಬಿಟಿಎಡಿ ಸ್ಥಾಪನೆಗಾಗಿ ಒಪ್ಪಂದ ಮಾಡಿಕೊಂಡಾಗಲೇ  ಬೋಡೊ ಅಲ್ಲದ 18 ಬುಡಕಟ್ಟು ಜನಾಂಗಳನ್ನೊಳಗೊಂಡ ಸನ್ಮಿಳಿತ ಜನಗೋಷ್ಠಿ ಸಂಗ್ರಾಮ 36 ಗಂಟೆಗಳ ಕಾಲ `ಅಸ್ಸಾಂ ಬಂದ್~ಗೆ ಕರೆ ನೀಡಿತ್ತು.

ಬಿಟಿಎಡಿಯಲ್ಲಿಯೇ ಶೇಕಡಾ 15ರಷ್ಟು ಜನಸಂಖ್ಯೆ ಹೊಂದಿರುವ ಕೋಚ್ ರಾಜವಂಶಿಗಳು ಆ ದಿನದಿಂದಲೇ ಸ್ವಾಯತ್ತ ಮಂಡಳಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿದೆ.

ಮೂಲತಃ ಬೋಡೊ ಕಚಾರಿ ಗುಂಪಿಗೆ ಸೇರಿರುವ ರಾಜವಂಶಿಗಳು ಕಾಲಾನುಕ್ರಮದಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಂಡವರು. ಹಿಂದುಳಿದ ಜಾತಿಗೆ ಸೇರಿರುವ ರಾಜವಂಶಿಗಳ ಒಂದು ಗುಂಪು ಆಗಲೇ ಉಗ್ರಗಾಮಿ ಸಂಘಟನೆಯನ್ನು ಕಟ್ಟಿಕೊಂಡು ಹಿಂಸಾಚಾರ ಶುರು ಮಾಡಿದೆ.

ಕಳೆದ ಜುಲೈನಲ್ಲಿ ನಡೆದ ಗಲಭೆಗೆ ಕಾರಣವಾದ ಮುಸ್ಲಿಮ್ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವುದು ರಾಜವಂಶಿ ಉಗ್ರಗಾಮಿ ಗುಂಪಿಗೆ ಸೇರಿರುವ ಯುವಕನನ್ನು. ಇವರ ಜತೆ ದಿಯೋರಿ, ಚುತಿಯಾ, ಸೋನೊವಾಲ್ ಕಾಚರಿ ಮೊದಲಾದ ಬುಡಕಟ್ಟು ಜನಾಂಗಗಳು ಸ್ವಾಯತ್ತ ಮಂಡಳಿಗಾಗಿ ಒತ್ತಾಯಿಸತೊಡಗಿವೆ.ತಮ್ಮ ಬೇಡಿಕೆ ಈಡೇರಿಸದಿದ್ದರೆ ಸಶಸ್ತ್ರಹೋರಾಟ  ಪ್ರಾರಂಭಿಸುವುದಾಗಿ ಈ ಸಮುದಾಯಗಳ ವಿದ್ಯಾರ್ಥಿ ಸಂಘಟನೆ ಬೆದರಿಕೆ ಹಾಕುತ್ತಿವೆ. ಇವುಗಳಲ್ಲಿ ಕೆಲವು ಜನಾಂಗಗಳ ಜನಸಂಖ್ಯೆ 35-40 ಸಾವಿರಕ್ಕಿಂತ ಹೆಚ್ಚಿಲ್ಲ.

ಈಡೇರದ ಆಶಯ
ಸ್ವಾಯತ್ತತೆಯ ವಿಚಾರದಲ್ಲಿ ಅಸ್ಸಾಂ ರಾಜ್ಯದ ಅನುಭವ ಉತ್ತೇಜನಕಾರಿಯಾಗಿಲ್ಲ. ಆಡಳಿತದಲ್ಲಿ ಸ್ವಾಯತ್ತತೆಯನ್ನು ನೀಡುವುರಿಂದ ಭಿನ್ನ ಭಾಷೆ-ಸಂಸ್ಕೃತಿಗಳನ್ನು ಹೊಂದಿರುವ ಜನಾಂಗಗಳ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು ಎಂಬ ಆಶಯ ಈಡೇರಿದಂತೆ ಕಾಣುತ್ತಿಲ್ಲ. ವಿಭಿನ್ನತೆಯ ಹೊರತಾಗಿಯೂ ಒಂದಾಗಿ ಬಾಳುತ್ತಿದ್ದ ಜನಾಂಗಗಳು ಮುಖ್ಯವಾಗಿ ಬೋಡೊಲ್ಯಾಂಡ್ ಚಳವಳಿಯ ನಂತರದ ದಿನಗಳಲ್ಲಿ ಒಂದೊಂದಾಗಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಹೊರಟು ಪರಸ್ಪರ ಸಂಘರ್ಷದಲ್ಲಿ ತೊಡಗಿವೆ. ಈ ರೀತಿ ಗುರುತಿಸಿಕೊಂಡರೆ ಮಾತ್ರ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ ಎಂದು ಅವರಿಗೂ ಮನವರಿಕೆಯಾದಂತಿದೆ. ಇದರಿಂದಾಗಿ ಅಹೋಮ್, ಚುತಿಯಾ, ಮೊಟೊಕ್, ಮೊರನ್, ಕೋಚ್ ರಾಜವಂಶಿ, ಮತ್ತು ಟೀಗಾರ್ಡನ್ ಕಾರ್ಮಿಕರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿವೆ. ಈ ಮೂಲಕ  ಪ್ರತ್ಯೇಕ ಸ್ವಾಯತ್ತ ಮಂಡಳಿಗಳನ್ನು ಪಡೆಯುವ ಪ್ರಯತ್ನದಲ್ಲಿ ತೊಡಗಿವೆ. ಇದೊಂದು ಕೊನೆಯಿಲ್ಲದ ಹೋರಾಟ.

 (ನಾಳಿನ ಸಂಚಿಕೆಯಲ್ಲಿ 7ನೇ ಕಂತು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT