ADVERTISEMENT

ಅಸ್ಸಾಂ ಹಿಂಸೆ, ಅಡ್ವಾಣಿ ಟೀಕೆ: ಲೋಕಸಭೆಯಲ್ಲಿ ಗದ್ದಲ, ಕಲಾಪ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 8:35 IST
Last Updated 8 ಆಗಸ್ಟ್ 2012, 8:35 IST

ನವದೆಹಲಿ (ಐಎಎನ್ಎಸ್): ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಯುಪಿಎ-2 ಸರ್ಕಾರವನ್ನು ~ಅಕ್ರಮ~ ಎಂಬುದಾಗಿ ಟೀಕಿಸಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಕೋಲಾಹಲ ಉಂಟಾಗಿ ಬುಧವಾರ ಸದನ ಎರಡನೇ ಬಾರಿ ಮುಂದೂಡಿಕೆಯಾಯಿತು. ಅಸ್ಸಾಂ ಹಿಂಸಾಚಾರಗಳ ಕುರಿತು ಸದನದಲ್ಲಿ ಕೋಲಾಹಲ ಉಂಟಾಗಿ ಇದಕ್ಕೂ ಮೊದಲು ಸದನ ಮುಂದೂಡಿಕೆಯಾಗಿತ್ತು.

ಎರಡನೇ ಬಾರಿ ಸಮಾವೇಶಗೊಂಡು ಅಸ್ಸಾಂ ಹಿಂಸಾಚಾರದ ಕುರಿತು ಚರ್ಚೆ ನಡೆಯುತ್ತಿದ್ದಾಗ ಅಡ್ವಾಣಿ ಅವರು ಮಾಡಿದ ಟೀಕೆಗೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ಎದುರಾಯಿತು. ನಂತರ ಅಡ್ವಾಣಿ ಅವರು ತಾನು ಪ್ರಸ್ತಾಪಿಸಿದ್ದು 2008ರ ಸಂಸತ್ತಿನ ವಿಶ್ವಾಸ ಮತದ ವಿಚಾರವನ್ನು ಹೊರತು 2009ರ ಚುನಾವಣೆಗಳ ಬಗೆಗೆ ಅಲ್ಲ ಎಂದು ಸ್ಪಷ್ಟನೆ ನೀಡಿದರು.

ಅಸ್ಸಾಂ ಹಿಂಸಾಚಾರದ ಬಗೆಗೆ ಮಾತನಾಡುತ್ತಾ ಅಡ್ವಾಣಿ ಅವರು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ -1 ನ್ಯಾಯಸಮ್ಮತವಾಗಿತ್ತು, ಆದರೆ ಯುಪಿಎ -2 ಅಲ್ಲ~ ಎಂದು ಹೇಳಿದರು.

ತತ್ ಕ್ಷಣವೇ ಎದ್ದು ನಿಂತು ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು ~ಅಡ್ವಾಣಿಯವರು ಈ ಟೀಕೆಯನ್ನು ಹಿಂತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು.

ಒಂದು ಹಂತದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ತಾಳ್ಮೆ ಕಳೆದುಕೊಂಡು ಬಿಜೆಪಿ ಸದಸ್ಯರತ್ತ ಕೈಸನ್ನೆ ಮಾಡಿದರು. ಲೋಕಸಭಾ ಅಧ್ಯಕ್ಷೆ ಮೀರಾ ಕುಮಾರ್ ಅವರು ಶಾಂತಿ ಕಾಪಾಡುವಂತೆ ಮಾಡಿದ ಮನವಿಗಳು ವ್ಯರ್ಥವಾದವು.

ಈ ಹಂತದಲ್ಲಿ ಸಭಾಧ್ಯಕ್ಷರು ಟೀಕೆಯನ್ನು ಹಿಂತೆಗೆದುಕೊಳ್ಳುವಂತೆ ಅಡ್ವಾಣಿ ಅವರಿಗೆ ಸೂಚಿಸಿದರು. ಆ ಬಳಿಕ ಸ್ಪಷ್ಟನೆ ನೀಡಿದ ಅಡ್ವಾಣಿ ತಾನು ಪ್ರಸ್ತಾಪಿಸಿದ್ದು 2008ರ ಜುಲೈಯಲ್ಲಿ ಯುಪಿಎ -1 ಸರ್ಕಾರವು ಗದ್ದಲದ ಮಧ್ಯೆ ವಿಶ್ವಾತ ಮತ ಗೆದ್ದ ವಿಚಾರವನ್ನು ಎಂದು ಹೇಳಿದರು.

ಅಡ್ವಾಣಿ ಅವರ ಸ್ಪಷ್ಟನೆ ಬಳಿಕವೂ ಸದನದಲ್ಲಿ ಗದ್ದಲ ಮುಂದುವರಿದಾಗ ಸಭಾಧ್ಯಕ್ಷೆ ಮೀರಾ ಕುಮಾರ್ ಅವರು ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.