ADVERTISEMENT

ಅಹಮದ್‌ ಪಟೇಲ್‌ ರಾಜೀನಾಮೆಗೆ ರೂಪಾಣಿ ಆಗ್ರಹ

ಪಿಟಿಐ
Published 28 ಅಕ್ಟೋಬರ್ 2017, 20:37 IST
Last Updated 28 ಅಕ್ಟೋಬರ್ 2017, 20:37 IST
ಅಹಮದ್‌ ಪಟೇಲ್‌ ರಾಜೀನಾಮೆಗೆ ರೂಪಾಣಿ ಆಗ್ರಹ
ಅಹಮದ್‌ ಪಟೇಲ್‌ ರಾಜೀನಾಮೆಗೆ ರೂಪಾಣಿ ಆಗ್ರಹ   

ನವದೆಹಲಿ, ಅಹಮದಾಬಾದ್‌: ಗುಜರಾತ್‌ನಲ್ಲಿ ಇತ್ತೀಚೆಗೆ ಬಂಧಿಸಲಾದ ಶಂಕಿತ ಐಎಸ್‌ ಉಗ್ರನೊಬ್ಬ ಕಾಂಗ್ರೆಸ್‌ ಮುಖಂಡ ಅಹಮದ್‌ ಪಟೇಲ್‌ ಟ್ರಸ್ಟಿ ಆಗಿದ್ದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಮುಖ್ಯಮಂತ್ರಿ ವಿಜಯಭಾಯಿ ರೂಪಾಣಿ ಆರೋಪಿಸಿದ್ದಾರೆ.

ಈ ವಿಚಾರ ದೇಶದ ಭದ್ರತೆಗೆ ಸಂಬಂಧಿಸಿರುವುದರಿಂದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಅಹಮದ್‌ ಪಟೇಲ್‌ ಅವರು ಈ ಬಗ್ಗೆ ವಿವರಣೆ ನೀಡಬೇಕು. ಪಟೇಲ್‌ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆದರೆ, ಈ ಆರೋಪ ಆಧಾರ ರಹಿತ ಎಂದು ಅಹಮದ್‌ ಪಟೇಲ್‌ ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಈ ವಿಷಯಕ್ಕೆ ರಾಜಕೀಯ ಬಣ್ಣ ಬೆರೆಸದಂತೆ ಮತ್ತು ಶಾಂತಿ ಬಯಸುವ ಗುಜರಾತಿನ ಜನರ ನಡುವೆ ಕಂದಕ ಸೃಷ್ಟಿಸದಂತೆ ಅವರು ಬಿಜೆಪಿಗೆ ಮನವಿ ಮಾಡಿದ್ದಾರೆ.

ADVERTISEMENT

‘ಭಯೋತ್ಪಾದಕನೊಬ್ಬ ಸುದೀರ್ಘ ಸಮಯದಿಂದ ಆಸ್ಪತ್ರೆಯಲ್ಲಿ ಹೇಗೆ ಉದ್ಯೋಗಿಯಾಗಿದ್ದ ಎಂಬ ಬಗ್ಗೆ ಕಾಂಗ್ರೆಸ್‌ ವಿವರಣೆ ನೀಡಬೇಕು’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಗುಜರಾತ್‌ನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಎರಡು ದಿನಗಳ ಹಿಂದೆ ಇಬ್ಬರು ಶಂಕಿತ ಐಎಸ್‌ ಕಾರ್ಯಕರ್ತರನ್ನು ಬಂಧಿಸಿತ್ತು. ಎಫ್‌ಐಆರ್‌ ಪ್ರಕಾರ, ಖಾಸಿಮ್‌ ಸ್ಟಿಂಬರ್‌ವಾಲಾ ಎಂಬ ಒಬ್ಬ ಆರೋಪಿ ಭರೂಚ್‌ ಜಿಲ್ಲೆಯ ಅಂಕಲೇಶ್ವರ ಪಟ್ಟಣದ ಸರ್ದಾರ್‌ ಪಟೇಲ್‌
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.

‘ದೀರ್ಘ ಸಮಯದಿಂದ ಪಟೇಲ್‌ ಅವರು ಮೇಲ್ವಿಚಾರಣೆ ನಡೆಸುತ್ತಿದ್ದ ಆಸ್ಪತ್ರೆಯಿಂದ ಭಯೋತ್ಪಾಕನನ್ನು ಬಂಧಿಸಿರುವುದು ಅತ್ಯಂತ ಗಂಭೀರ ವಿಚಾರ. ಪಟೇಲ್‌ ಅವರು ಆಸ್ಪತ್ರೆಯ ಟ್ರಸ್ಟಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಆಸ್ಪತ್ರೆಯ ವ್ಯವಹಾರಗಳನ್ನು ಅವರು ನೋಡಿಕೊಳ್ಳುತ್ತಿದ್ದರು ಎಂಬುದು ಈಗ ಬಹಿರಂಗವಾಗಿದೆ’ ಎಂದು ರೂಪಾಣಿ ಆರೋಪಿಸಿದ್ದಾರೆ.

(ವಿಜಯಭಾಯಿ ರೂಪಾಣಿ)

‘ಬಂಧನಕ್ಕೆ ಎರಡು ದಿನಗಳ ಮೊದಲು ಖಾಸಿಮ್‌ ರಾಜೀನಾಮೆ ನೀಡಿರುವ ಸಂಗತಿ ಬಯಲಾಗಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಂತಹ ವ್ಯಕ್ತಿ ಪಟೇಲ್‌ ಆಸ್ಪತ್ರೆಯಲ್ಲಿ ಕೆಲಸ ಪಡೆಯಲು ಹೇಗೆ ಸಾಧ್ಯ? ಬಂಧನದ ಎರಡು ದಿನಗಳ ಹಿಂದೆಯಷ್ಟೇ ರಾಜೀನಾಮೆ ಯಾಕೆ ನೀಡಿದ ಎಂಬ ಬಗ್ಗೆ ಪಟೇಲ್‌ ಸ್ಪಷ್ಟನೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಈ ಆರೋಪಗಳಿಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಪಟೇಲ್‌, ‘ನಾನು ಮತ್ತು ನನ್ನ ಪಕ್ಷವು ಇಬ್ಬರು ಭಯೋತ್ಪಾದಕರನ್ನು ಬಂಧಿಸಿರುವ ಎಟಿಎಸ್‌ ಅನ್ನು ಶ್ಲಾಘಿಸುತ್ತೇವೆ. ಅವರ ವಿರುದ್ಧ ಶೀಘ್ರವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಆದರೆ, ಬಿಜೆಪಿ ನನ್ನ ವಿರುದ್ಧ ಮಾಡಿರುವ ಆರೋಪ ಆಧಾರ ರಹಿತ’ ಎಂದು ಹೇಳಿದ್ದಾರೆ.

ಮೊದಲೇ ಊಹಿಸಿದ್ದೆ: ಚಿದಂಬರಂ

ಅಹಮದ್‌ ಪಟೇಲ್‌ ಅವರ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಈ ಆರೋಪ ಮಾಡಿದೆ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ತಿರುಗೇಟು ನೀಡಿದ್ದಾರೆ.

ಬಿಜೆಪಿ ಇಂತಹ ಕ್ಷುಲ್ಲಕ ಆರೋಪ ಮಾಡುತ್ತದೆ ಎಂದು ಮೊದಲೇ ಊಹಿಸಿದ್ದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.