ADVERTISEMENT

ಆಂತರಿಕ ಭದ್ರತೆಗೆ ಅಪಾಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 17:05 IST
Last Updated 8 ಮಾರ್ಚ್ 2011, 17:05 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಇತ್ತೀಚಿನ ಸ್ಥಿತಿಗತಿ ವರದಿಯನ್ನು ಸಿಬಿಐ ಮಂಗಳವಾರ ಇಲ್ಲಿನ ನ್ಯಾಯಾಲಯಲಕ್ಕೆ ಸಲ್ಲಿಸಿದೆ.

ಅಸಮರ್ಥ ನಿರ್ವಾಹಕರಿಗೆ 2ಜಿ ತರಂಗಾಂತರ ಹಂಚಿ ದೇಶದ ಆಂತರಿಕ ಭದ್ರತೆ ಅಪಾಯಕ್ಕೆ ಸಿಲುಕಿದೆಯೇ ಎಂಬುದನ್ನು ತಿಳಿದುಕೊಳ್ಳುವ ಮುಖ್ಯ ಉದ್ದೇಶದೊಂದಿಗೆ ತಾನು ಇದೀಗ ತನಿಖೆ ನಡೆಸುತ್ತಿರುವುದಾಗಿ ಸಿಬಿಐ ವಿಶೇಷ ನ್ಯಾಯಾಧೀಶ ಪ್ರದೀಪ್ ಛಡ್ಡ ಅವರಿಗೆ ಸಲ್ಲಿಸಲಾದ ತನಿಖಾ ಸ್ಥಿತಿಗತಿ ವರದಿಯಲ್ಲಿ ತಿಳಿಸಲಾಗಿದೆ.

2ಜಿ ಹಗರಣದಿಂದ ದೇಶದ ಆಂತರಿಕ ಭಧ್ರತೆಗೆ ಅಪಾಯ ಎದುರಾಗಿದೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದ್ದರು.ಪ್ರಕರಣದ ಬಗ್ಗೆ ತನಿಖೆ ನಡೆಸಲು ಸರ್ಕಾರಿ ವಕೀಲರೊಬ್ಬರನ್ನು ನಿಯೋಜಿಸಲು ಅವಕಾಶ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದರು. ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ಕೆಲಸ ಇದ್ದುದರಿಂದ ಅವರು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ.

ಸಿಬಿಐ ನಡೆಸುತ್ತಿರುವ ತನಿಖೆಯನ್ನು ಸುಪ್ರೀಂ ಕೋರ್ಟ್ ಕೂಡ ಗಮನಿಸುತ್ತಿದೆ ಎಂದು ಸಿಬಿಐ ಪರ ವಕೀಲರು ತಿಳಿಸಿದರು.ಪರವಾನಗಿ ಪಡೆದಿದ್ದ ಸ್ವಾನ್ ಟೆಲಿಕಾಂ ಮತ್ತು ಯೂನಿಟೆಕ್ ವೈರ್‌ಲೆಸ್ ಕಂಪೆನಿಗಳು ತಮ್ಮ ಷೇರುಗಳನ್ನು ವಿದೇಶಿ ಕಂಪೆನಿಗಳಾದ ಎಟಿಸಲಾತ್ ಡಿ.ಬಿ. ಮತ್ತು ಟೆಲೆನೋರ್ ಕಂಪೆನಿಗಳಿಗೆ ಮಾರಾಟ ಮಾಡಿವೆ.

ಈ ಕಂಪೆನಿಗಳು ಪಾಕಿಸ್ತಾನದೊಂದಿಗೆ ನೇರ ಸಂಪರ್ಕ ಹೊಂದಿವೆ. ಇದರಿಂದ ದೇಶದ ಆಂತರಿಕ ಭದ್ರತೆ ಭಾರಿ ಅಪಾಯಕ್ಕೆ ಸಿಕ್ಕಿದೆ ಎಂದು ಸ್ವಾಮಿ ತಮ್ಮ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.