ADVERTISEMENT

ಆಂಧ್ರಪ್ರದೇಶದ ರಾಜಧಾನಿ ‘ಅಮರಾವತಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2015, 19:30 IST
Last Updated 23 ಮಾರ್ಚ್ 2015, 19:30 IST

ಹೈದರಾಬಾದ್‌: ಗುಂಟೂರು ಜಿಲ್ಲೆಯಲ್ಲಿ  ನಿರ್ಮಾಣವಾಗಲಿರುವ ಆಂಧ್ರಪ್ರದೇಶದ ನೂತನ ರಾಜಧಾನಿಗೆ ‘ಅಮರಾವತಿ’ ಎಂದು ಹೆಸರಿಡಲು ಆಂಧ್ರ ಸರ್ಕಾರ ನಿರ್ಧರಿಸಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಈ ಕುರಿತು ಅಧಿಕೃತಘೋಷಣೆ ಮಾಡಲು ಬಯಸಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಘೋಷಣೆ ಮಾಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜಧಾನಿ ನಿರ್ಮಿಸಲು ಆಂಧ್ರಪ್ರದೇಶ ಸರ್ಕಾರ ತುಳ್ಳೂರು ಮತ್ತು ಉಂಡವಳ್ಳಿ ಮಂಡಲದ 29 ಗ್ರಾಮಗಳ 33,000 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದೆ.

ಸಿಂಗಪುರ ಸರ್ಕಾರ ನೂತನ ರಾಜಧಾನಿಯ ವಿನ್ಯಾಸ ಒದಗಿಸಲಿದೆ ಮತ್ತು ಅಂದಾಜು ₨27,000 ಕೋಟಿ ವೆಚ್ಚದಲ್ಲಿ ಜಪಾನ್‌ನ ಕಂಪೆನಿಗಳು ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಮರಾವತಿ ಪಟ್ಟಣ ಕೃಷ್ಣಾ ನದಿ ದಡದಲ್ಲಿದೆ. ಗುಂಟೂರು ಪಟ್ಟಣದಿಂದ 35 ಕಿಲೋ ಮೀಟರ್‌ ಮತ್ತು ವಿಜಯವಾಡದಿಂದ 40 ಕಿಲೋ ಮೀಟರ್‌ ದೂರದಲ್ಲಿರುವ ಈ ಐತಿಹಾಸಿಕ ಪಟ್ಟಣದಲ್ಲಿ ಅಮರೇಶ್ವರ ದೇವಾಲಯವಿದೆ.

ಕೃಷ್ಣಾ ನದಿ ದಡದಲ್ಲಿರುವ ಅಮರಾವತಿ ಸಣ್ಣ  ಪಟ್ಟಣ. ಇಲ್ಲಿ ಶಾತವಾಹನರು ಆಳ್ವಿಕೆ ನಡೆಸಿದ್ದರು. ಆಂಧ್ರದ ಅನೇಕ ಅರಸರು ಆಳಿದ ಈ ಪಟ್ಟಣ ಮೊದಲು ಮೊಗಲರ ನಂತರ ಬ್ರಿಟಿಷರ ವಶವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.