ಹೈದರಾಬಾದ್ (ಐಎಎನ್ಎಸ್): ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ್ದು ಎಂದು ಶಂಕಿಸಲಾಗಿರುವ ಚೂರುಗಳು ಆಂಧ್ರ ಪ್ರದೇಶ ಕರಾವಳಿಯತ್ತ ಬುಧವಾರ ತೇಲಿ ಬಂದಿವೆ ಎಂದು ತೆಲುಗು ಟೆಲಿವಿಷನ್ ವಾಹಿನಿಯೊಂದು ವರದಿ ಮಾಡಿದೆ.
ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿನ ನೆಲ್ಲೂರು ಜಿಲ್ಲೆಯ ಟಿ.ಪಿ. ಗುಡೂರು ಮಂಡಲದ ಕುಟ್ಟ ಗೌಡೂರು ಬಳಿ ಬಂಗಾಳ ಆಖಾತದಲ್ಲಿ ಅಪರಿಚಿತ ವಸ್ತು ತೇಲಿ ಬಂದಿರುವುದನ್ನು ತಾವು ನೋಡಿರುವುದಾಗಿ ಮೀನುಗಾರರು ಪೊಲೀಸರಿಗೆ ತಿಳಿಸಿದ್ದಾರೆ.
ಟಿವಿ ವಾಹಿನಿಯ ಪ್ರಕಾರ ಅಧಿಕಾರಿಗಳು ತತ್ ಕ್ಷಣವೇ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏನಿದ್ದರೂ ಸಮುದ್ರದಲ್ಲಿ ತೇಲುತ್ತಿರುವ ವಸ್ತುಗಳು ನಿಜವಾಗಿಯೇ ವಿಮಾನದ ಚೂರುಗಳೇ ಎಂಬ ಬಗ್ಗೆ ಅಧಿಕಾರಿಗಳಿಂದ ಯಾವುದೇ ದೃಢೀಕರಣ ಲಭ್ಯವಾಗಿಲ್ಲ.
ಐವರು ಭಾರತೀಯರು ಸೇರಿದಂತೆ 239 ಜನರನ್ನು ಹೊತ್ತ ಮಲೇಷ್ಯಾ ವಿಮಾನವು ಮಾರ್ಚ್ 8ರಂದು ಕ್ವಾಲಾಲಂಪುರದಿಂದ ಬೀಜಿಂಗ್ ಮಾರ್ಗವಾಗಿ ಸಾಗುತ್ತಿದ್ದಾಗ ನಿಗೂಢವಾಗಿ ಕಣ್ಮರೆಯಾಗಿತ್ತು.
ವಿಮಾನವು ಬಂಗಾಳ ಆಖಾತ ಇಲ್ಲವೇ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿರಬಹುದು ಎಂದು ಮಲೇಷ್ಯಾದ ಟಿವಿ ಸುದ್ದಿ ವಾಹಿನಿಯೊಂದು ಎರಡು ದಿನಗಳ ಹಿಂದಷ್ಟೇ ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.