ADVERTISEMENT

ಆಂಧ್ರ ಬಜೆಟ್: ವಿರೋಧ ಪಕ್ಷಗಳ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಹೈದರಾಬಾದ್ (ಐಎಎನ್‌ಎಸ್): ಆಂಧ್ರಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ಸೋಮವಾರ ವಿರೋಧ ಪಕ್ಷಗಳ ಗದ್ದಲ ಮತ್ತು ಕೋಲಾಹಲಕ್ಕೆ ವೇದಿಕೆಯಾಯಿತು. ಜಂಟಿ ಅಧಿವೇಶನವನ್ನುದೇಶಿಸಿ ರಾಜ್ಯಪಾಲರು ಭಾಷಣ ಆರಂಭಿಸಿದೊಡನೆ ಗದ್ದಲವೆಬ್ಬಿಸಿದ ವಿರೋಧಪಕ್ಷದವರು ಸಭಾತ್ಯಾಗ ಮಾಡಿದರು.

ರಾಜ್ಯಪಾಲ ಇ. ಎಸ್. ಎಲ್. ನರಸಿಂಹನ್ ಅವರ ಭಾಷಣದ ಪ್ರತಿಯನ್ನು ಹರಿದು ಹಾಕಿದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸದಸ್ಯರು ಕಾಗದದ ಚೂರುಗಳನ್ನು ರಾಜ್ಯಪಾಲರತ್ತ ಎಸೆದರು. `ಜೈ ತೆಲಂಗಾಣ~ ಎಂದು ಘೋಷಣೆ ಕೂಗುತ್ತಾ ರಾಜ್ಯಪಾಲರ ಬಳಿ ಧಾವಿಸುತ್ತಾ ಅವರ ಭಾಷಣಕ್ಕೆ ತಡೆಯೊಡ್ಡಲು ಪ್ರಯತ್ನಿಸಿದರು. 

 ಇದೇ ವೇಳೆ ರೈತರು ಮತ್ತು ಇತರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಮತ್ತೊಂದು ಪ್ರಮುಖ ವಿರೋಧಪಕ್ಷವಾದ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಶಾಸಕರೂ ರಾಜ್ಯಪಾಲರ ಭಾಷಣಕ್ಕೆ ತಡೆಯೊಡ್ಡಿದರು. ಕೋಲಾಹಲವೆಬ್ಬಿಸುತ್ತಾ ವಿರೋಧಪಕ್ಷದ ಸದಸ್ಯರೆಲ್ಲರೂ ಹೊರನಡೆದರು. ಹದಿನೈದು ನಿಮಿಷಗಳ ಬಳಿಕ ಸದನ ಸಹಜಸ್ಥಿತಿಗೆ ಮರಳಿತಲ್ಲದೆ ರಾಜ್ಯಪಾಲರು ನಿರಾತಂಕವಾಗಿ ತಮ್ಮ ಭಾಷಣವನ್ನು ಓದಿದರು.

ರಾಜ್ಯಪಾಲರ ಭಾಷಣದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ವಿಧಾನಸಭೆಯ ಆವರಣದಲ್ಲಿ ಟಿಡಿಪಿ, ಟಿಆರ್‌ಎಸ್, ಸಿಪಿಐ ಮತ್ತು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.