ADVERTISEMENT

ಆಂಧ್ರ ಮಾಜಿ ಸಚಿವರಿಗೂ ಉರುಳು?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಕಂಪೆನಿ ಲಕ್ಷಾಂತರ ಟನ್ ಅದಿರನ್ನು ಅಕ್ರಮವಾಗಿ ಸಾಗಿಸುತ್ತಿದ್ದರೂ ನಿಷ್ಕ್ರಿಯರಾಗಿದ್ದ ಆಂಧ್ರದ ಕೆಲವು ಸಚಿವರು ಹಾಗೂ ಅಧಿಕಾರಿಗಳು ಈಗ ಸಿಬಿಐ ಉರುಳಿಗೆ ಬೀಳುವ ಸಾಧ್ಯತೆ ಇದೆ.

ಅಕ್ರಮವಾಗಿ ಸಾಗಿಸಲು ನೆರವಾಗಿದ್ದಲ್ಲದೆ, ಅದನ್ನು ಕೃಷ್ಣಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣ ಬಂದರುಗಳಿಂದ ಹೊರದೇಶಗಳಿಗೆ ರಫ್ತು ಮಾಡಲು ನೆರವಾದ ಆರೋಪ ಇವರನ್ನು ಸುತ್ತಿಕೊಂಡಿದೆ. ಸಿಬಿಐ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿರುವುದರಿಂದ ಹಲವು ಅಧಿಕಾರಿಗಳು ಈಗಾಗಲೇ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಈಗ ರೆಡ್ಡಿ ದ್ವಯರ (ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ) ವಿರುದ್ಧ ಹೂಡಿರುವ ಮೊಕದ್ದಮೆಗೆ ಮತ್ತೆರಡು ಸೆಕ್ಷನ್‌ಗಳನ್ನು ಲಗತ್ತಿಸಲು ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಅಕ್ರಮ ಗಣಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ರಾಜಕೀಯ ಮುಖಂಡರನ್ನು ಗುರಿಯಾಗಿಸಿಕೊಂಡು ಭಾರತೀಯ ದಂಡ ಸಂಹಿತೆ-ಐಪಿಸಿ 409ನೇ ಕಲಂ (ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯಿಂದ ನಂಬಿಕೆ ದ್ರೋಹ) ಹಾಗೂ ಗಣಿ ಮಾಫಿಯಾಕ್ಕೆ ನೆರವಾದ  ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು 468ನೇ ಕಲಂ (ವಂಚನೆಗಾಗಿ ನಕಲು ಸಹಿ ಮಾಡುವುದು) ಸೇರಿಸಲು ಅದು ಮನವಿ ಮಾಡಿದೆ.

ರೆಡ್ಡಿ ಅವರಿಗೆ ಅದಿರು ಗಣಿಗಳನ್ನು ಮಂಜೂರು ಮಾಡುವಲ್ಲಿ ಪಕ್ಷಪಾತ ಎಸಗಿದ ಆರೋಪ ಐಎಎಸ್ ಅಧಿಕಾರಿಗಳಾದ ಶ್ರೀಲಕ್ಷ್ಮಿ ಮತ್ತು ರಾಜಗೋಪಾಲ್ ವಿರುದ್ಧ ಮುಂಚಿನಿಂದಲೂ ಕೇಳಿಬರುತ್ತಿದೆ. ಗಣಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಜಗೋಪಾಲ್ ಈಗ ನಿವೃತ್ತರು.

ವೈ.ಎಸ್.ರಾಜಶೇಖರ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾಗಿದ್ದಾಗ ಶ್ರೀಲಕ್ಷ್ಮಿ ಗಣಿ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ ಕೆ.ರೋಸಯ್ಯ ಮುಖ್ಯಮಂತ್ರಿಯಾದಾಗ ಶ್ರೀಲಕ್ಷ್ಮಿ ಅವರನ್ನು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿಸಿದರು. ಅವರು ಈಗ ಈ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದಾರೆ.

ಅಕ್ರಮ ಗಣಿಗಾರಿಕೆ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ ಪ್ರತಿಪಕ್ಷ ತೆಲುಗು ದೇಶಂ, ರಾಜಶೇಖರ ರೆಡ್ಡಿ ಅವಧಿಯಲ್ಲಿ ಗಣಿ ಸಚಿವರಾಗಿದ್ದವರ ವಿರುದ್ಧ ತನಿಖೆಗೆ ಒತ್ತಾಯಿಸುತ್ತಿದೆ. ರಾಜಶೇಖರ ರೆಡ್ಡಿ ಅವರಿಗೆ ಅತಿ ನಿಕಟವಾಗಿದ್ದ ಸಬಿತಾ ರೆಡ್ಡಿ ಅವರ ಹೆಸರೂ ಇದರಲ್ಲಿ ಸೇರಿದೆ. ಅದೇ ರೀತಿ ಆಗ ಸ್ವಲ್ಪ ಅವಧಿಗೆ ಗಣಿ ಸಚಿವರಾಗಿದ್ದ (ಇದೀಗ ಜಗನ್ ಪಾಳಯದಲ್ಲಿರುವ) ಬಾಲಿನೇನಿ ಶ್ರೀನಿವಾಸ ರೆಡ್ಡಿ ವಿರುದ್ಧವೂ ತನಿಖೆಗೆ ಆಗ್ರಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.