ADVERTISEMENT

ಆಕ್ಷೇಪಣಾ ಅರ್ಜಿ ಸಲ್ಲಿಕೆಗೆ ಚು. ಆಯೋಗ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 20:20 IST
Last Updated 11 ಮಾರ್ಚ್ 2011, 20:20 IST

ನವದೆಹಲಿ: ರಾಜ್ಯದ ಸಚಿವರಾದ ಜಿ.ಜನಾರ್ದನರೆಡ್ಡಿ, ಜಿ.ಕರುಣಾಕರರೆಡ್ಡಿ ಮತ್ತು ಬಿ. ಶ್ರೀರಾಮುಲು ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಹಾಗೂ ವ್ಯತಿರಿಕ್ತ ಹಿತಾಸಕ್ತಿ ಆರೋಪ ಕುರಿತು ವಿಚಾರಣೆ ನಡೆಸುತ್ತಿರುವ ಚುನಾವಣಾ ಆಯೋಗವು ಒಂದು ವಾರದಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಾದ ಕೆ.ಸಿ. ಕೊಂಡಯ್ಯ ಅವರಿಗೆ ಸೂಚಿಸಿದೆ.

ಕೊಂಡಯ್ಯ ಅವರ ಅರ್ಜಿಗೆ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಪರ ವಕೀಲರು ಸಲ್ಲಿಸಿದ ಉತ್ತರಗಳನ್ನು ಆಲಿಸಿದ ಚುನಾವಣಾ ಆಯೋಗ ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಶುಕ್ರವಾರ ಅರ್ಜಿದಾರರಿಗೆ ನಿರ್ದೇಶಿಸಿತು.

ತಮ್ಮ ಮೇಲೆ ಮಾಡಲಾದ ಆರೋಪಗಳನ್ನು ನಿರಾಕರಿಸಿದ ಪ್ರತಿವಾದಿಗಳು ಇದು ರಾಜಕೀಯ ದುರುದ್ದೇಶದಿಂದ ಕೂಡಿದ್ದು ಎಂದರು. ಗಣಿ ಗುತ್ತಿಗೆ ಅಥವಾ ಗಣಿ ಕಂಪೆನಿಗಳನ್ನು ಹೊಂದಲಾಗಿದೆ ಎಂಬ ಕಾರಣಕ್ಕೆ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬಾರದು. ಇದು ವ್ಯತಿರಿಕ್ತ ಹಿತಾಸಕ್ತಿ ಸಾಧನೆ ಆಗಲಾರದು ಎಂದು ವಾದಿಸಿದರು.

ಈ ಮೂವರು ಲಾಭ ಗಳಿಕೆಗಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಆ ಮೂಲಕ ವ್ಯತಿರಿಕ್ತ ಹಿತಾಸಕ್ತಿ ಸಾಧನೆ ಮಾಡುತ್ತಿದ್ದಾರೆ. ಅಲ್ಲದೆ, ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಕೊಂಡಯ್ಯ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.  ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ದೂರನ್ನು ಕಳುಹಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಆಯೋಗ ಕೈಗೆತ್ತಿಕೊಂಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.