ನವದೆಹಲಿ: ವಾಯುಪಡೆಯ ಅತಿ ಗಣ್ಯರ ಬಳಕೆಗಾಗಿ ಹೆಲಿಕಾಪ್ಟರ್ ಪೂರೈಸುವ ಒಪ್ಪಂದ ರದ್ದುಪಡಿಸಿದ ಬೆನ್ನಲ್ಲೇ ರಕ್ಷಣಾ ಸಚಿವಾಲಯ, ಇಟಲಿಯ ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪೆನಿ ನೀಡಿದ್ದ ಬ್ಯಾಂಕ್ ಖಾತರಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ.
ರೂ.3,600 ಕೋಟಿ ಮೊತ್ತದ ಹೆಲಿಕಾಪ್ಟರ್ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪೆನಿ ಭಾರತ ಸರ್ಕಾರಕ್ಕೆ ರೂ.1800 ಕೋಟಿ ಮೊತ್ತದ ಬ್ಯಾಂಕ್ ಖಾತರಿ ನೀಡಿತ್ತು.
ಭಾರತ ಸರ್ಕಾರ ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪೆನಿಗೆ ಒಪ್ಪಂದದ ಮೊತ್ತವಾಗಿದ್ದ ರೂ.3,600ಕೋಟಿಯ ಶೇ 40ರಷ್ಟು ಹಣವನ್ನು ಮುಂಗಡ ರೂಪದಲ್ಲಿ ನೀಡಿದೆ. ಇದೀಗ ವೆಸ್ಟ್ಲ್ಯಾಂಡ್ ಕಂಪೆನಿ ನೀಡಿದ್ದ ರೂ.1800 ಕೋಟಿ ಬ್ಯಾಂಕ್ ಖಾತರಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸ್ವಲ್ಪ ಪ್ರಮಾಣದ ಹಣವನ್ನು ಮರಳಿ ಪಡೆಯಲು ಮುಂದಾಗಿದೆ.
ಬೆಂಬಲಕ್ಕೆ ನಿಂತ ಬ್ರಿಟನ್ (ಲಂಡನ್ ವರದಿ): ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಇಟಲಿಯ ಆಗಸ್ಟಾ ವೆಸ್ಟ್ಲ್ಯಾಂಡ್ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ವಾಸ್ತವಾಂಶ ಸಾಬೀತುಪಡಿಸಲು ಸಮಯ ನೀಡಬೇಕಿತ್ತು ಎಂದು ಹೇಳುವ ಮೂಲಕ ಬ್ರಿಟನ್ ಸರ್ಕಾರ ಕಂಪೆನಿಯನ್ನು ಸಮರ್ಥಿಸಿಕೊಂಡಿದೆ.
ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿ ಸಂಬಂಧ ಆಗಸ್ಟಾ ವೆಸ್ಟ್ಲ್ಯಾಂಡ್ ಜೊತೆಗಿನ ರೂ.3,600 ಕೋಟಿ ಒಪ್ಪಂದವನ್ನು ಭಾರತ ಬುಧವಾರ ರದ್ದುಗೊಳಿಸಿದ ಬೆನ್ನಲ್ಲೇ ಆ ದೇಶದಿಂದ ಈ ಹೇಳಿಕೆ ಹೊರಬಿದ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.