ADVERTISEMENT

ಆಜೀವವೋ, ಗಲ್ಲೋ?

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಳೆ ಶಿಕ್ಷೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 3:46 IST
Last Updated 12 ಸೆಪ್ಟೆಂಬರ್ 2013, 3:46 IST
ಆಜೀವವೋ, ಗಲ್ಲೋ?
ಆಜೀವವೋ, ಗಲ್ಲೋ?   

ನವದೆಹಲಿ(ಪಿಟಿಐ/ಐಎಎನ್‌ಎಸ್‌): ದೇಶದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ತೀವ್ರ ತಲ್ಲಣ ಉಂಟು ಮಾಡಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಶುಕ್ರವಾರ (ಸೆ.13) ಪ್ರಕಟಿಸುವುದಾಗಿ ಇಲ್ಲಿನ ತ್ವರಿತಗತಿ ನ್ಯಾಯಾಲಯ ಹೇಳಿದೆ.

ಶಿಕ್ಷೆ ಪ್ರಮಾಣ ಕುರಿತು ಬುಧವಾರ ಅಪರಾಧಿಗಳ ಪರ ಮತ್ತು ಸರ್ಕಾರದ ಪರ ವಕೀಲರು ಮೂರು ತಾಸುಗಳವರೆಗೆ ಸುದೀರ್ಘವಾಗಿ ಮಂಡಿಸಿದ ವಾದ­ಆಲಿಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಯೋಗೇಶ್‌ ಖನ್ನಾ, ಶಿಕ್ಷೆ ಪ್ರಕಟಿಸುವುದನ್ನು ಶುಕ್ರವಾರ ಮಧ್ಯಾಹ್ನಕ್ಕೆ ಕಾಯ್ದಿರಿಸಿದರು.

ಗಲ್ಲು ಶಿಕ್ಷೆಯೇ ಸೂಕ್ತ: ಇದಕ್ಕೂ ಮೊದಲು ವಾದ ಮಂಡಿಸಿದ  ವಿಶೇಷ ಸರ್ಕಾರಿ ವಕೀಲ ದಯನ್‌ ಕೃಷ್ಣನ್, ‘23 ವರ್ಷದ ವಿದ್ಯಾರ್ಥಿನಿ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸೆಗಿ ಕೊಲೆ ಮಾಡಿರುವ ಈ ಪ್ರಕರಣ ಅಪರೂಪದಲ್ಲಿ ಅಪರೂಪ­ವಾದದ್ದು.  ಆದ್ದರಿಂದ ಅಪರಾಧಿಗಳಾದ ಮುಕೇಶ್‌ (26), ವಿನಯ್‌ ಶರ್ಮಾ (20), ಪವನ್‌ ಗುಪ್ತಾ (19) ಮತ್ತು ಅಕ್ಷಯ್‌ ಠಾಕೂರ್‌ಗೆ (28) ಮರಣ­ದಂಡನೆಯನ್ನೇ ವಿಧಿಸಬೇಕು’ ಎಂದು ಕೋರಿದರು.

ದಯೆ ತೋರಲು ಮನವಿ: ಆದರೆ, ಅಪರಾಧಿಗಳ ಪರ ವಕೀಲರು, ‘ನ್ಯಾಯಾಲಯವು ಶಿಕ್ಷೆ ವಿಧಿಸುವಾಗ ದಯೆ ತೋರಬೇಕು. ಇಂತಹ ಪ್ರಕರಣಗಳಲ್ಲಿ ಸರ್ವೆಸಾಧಾರಣ­ವಾಗಿ ಜೀವಾವಧಿ ಶಿಕ್ಷೆ ವಿಧಿಸಲಾ­ಗುತ್ತದೆ. ಮರಣದಂಡನೆ ಕಡೆಯ ಐಚ್ಛಿಕ’ ಎಂದರು. ಜೊತೆಗೆ, ಮಹಾತ್ಮ ಗಾಂಧಿ ಅವರ ‘ಜೀವ ನೀಡಲು ಮತ್ತು ತೆಗೆಯಲು ದೇವರೊಬ್ಬನೇ ಶಕ್ತ’ ಎಂಬ ಹೇಳಿಕೆಯನ್ನೂ ಉಲ್ಲೇಖಿಸಿದರು.

‘ನ್ಯಾಯಾಲಯದ ಹೊರಗೆ ನಡೆದ ಅನೇಕ ಬೆಳವಣಿಗೆಗಳು ಈ ಪ್ರಕರಣದ ವಿಚಾರಣೆ ಮೇಲೆ ಪ್ರಭಾವ ಬೀರಿವೆ.  ಇದಕ್ಕೆ ಮಹತ್ವ ನೀಡಬಾರದು ಮತ್ತು ಅಪರಾಧಿಗಳ ಬಗ್ಗೆ ಕಠೋರವಾಗಿ ವರ್ತಿಸಬಾರದು’ ಎಂದೂ ಕೋರಿದರು.

‘ಯುವಕನಾದ ಪವನ್‌ ಗುಪ್ತಾನಿಗೆ ಸುಧಾರಣೆಗೆ ಒಂದು ಅವಕಾಶ ನೀಡ­ಬೇಕು. ಮದ್ಯದ ಅಮಲು ಮತ್ತು ಸನ್ನಿವೇಶದ ಪ್ರಚೋದನೆಯಿಂದ ಆತ ಈ ಕೃತ್ಯದಲ್ಲಿ ಭಾಗಿಯಾಗಿದ್ದ. ಇದು ಪೂರ್ವಯೋಜಿತ ಕೃತ್ಯವಲ್ಲ. ಹಣ್ಣು ಮಾರಾಟ ಮಾಡಿ ಕುಟುಂಬವನ್ನು ಸಲಹುವ ಆತನ ಬಗ್ಗೆ ನ್ಯಾಯಾಲಯವು ಕಠಿಣ ನಿಲುವು ತೋರಬಾರದು’ ಎಂದು ಪವನ್‌ ಗುಪ್ತಾ ಪರ ವಕೀಲರಾದ ವಿವೇಕ್‌ ಶರ್ಮಾ ಮತ್ತು ಸದಾಶಿವ ಗುಪ್ತಾ ಕೋರಿದರು.

ವಿನಯ್‌ ಹಾಗೂ ಅಕ್ಷಯ್‌ ಪರ ವಾದ ಮಂಡಿಸಿದ ವಕೀಲ ಎ.ಪಿ. ಸಿಂಗ್‌, ‘ವಿನಯ್‌ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿ. ಈತ ಅನೇಕ ಸಾರಿ ರಕ್ತದಾನ ಮಾಡಿದ್ದಾನೆ. ಅಪರಿಚಿತರಿಗೆ ರಕ್ತ ನೀಡಿರುವ ಈತ, ಇನ್ನೊಬ್ಬರು ಜೀವವನ್ನು ಹೇಗೆ ತಾನೆ ತೆಗೆದಾನು. ಘಟನೆ ನಡೆದ ಸಮಯದಲ್ಲಿ ಬಸ್‌ನಲ್ಲಿ ಇರಲಿಲ್ಲ ಎಂದು ಅವನು ಹೇಳುತ್ತಲೇ ಬಂದಿದ್ದಾನೆ. ಆದರೂ ಅವನು ಸನ್ನಿ­ವೇಶದ ಬಲಿಪಶು ಆಗಿದ್ದಾನೆ’ ಎಂದರು.

‘ಅಕ್ಷಯ್‌ ಸುಸಂಸ್ಕೃತ ಮನೆತನದಿಂದ ಬಂದ ಯುವಕ. ಈತನ ಬಗ್ಗೆ ನೆರೆಹೊರೆ­ಯವರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಇವರಿಬ್ಬರಿಗೆ ಮರಣ­ದಂಡನೆ ವಿಧಿಸಿದ ಮಾತ್ರಕ್ಕೆ ಅತ್ಯಾಚಾರ ಪ್ರಕರಣಗಳು ಕೊನೆಗೊಳ್ಳುತ್ತವೆಯೇ? ಈ ಪ್ರಕರಣ­ವನ್ನು ರಾಜಕೀಯ ಲಾಭಕ್ಕಾಗಿ ಬಳ­ಸಿಕೊಳ್ಳುವ ಪ್ರಯತ್ನಗಳು ನಡೆಯು­ತ್ತಿವೆ. ಆಡಳಿತ ಮತ್ತು ಪ್ರತಿಪಕ್ಷಗಳು ಮತ ಬ್ಯಾಂಕ್‌ಗಾಗಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುತ್ತಿವೆ’ ಎಂದರು.

ಮುಕೇಶ್‌ ಪರ ಹಾಜರಿದ್ದ ವಕೀಲ ವಿ.ಕೆ. ಆನಂದ್‌, ‘ವಿಚಾರಣೆ ವೇಳೆ­ಯಲ್ಲಿ ನನ್ನ ಕಕ್ಷಿದಾರರನ್ನು ಸರಿಯಾಗಿ ಸಮರ್ಥಿಸಿಕೊಳ್ಳಲು ಅವಕಾಶ ಸಿಗಲಿಲ್ಲ. ಮುಕೇಶ್‌ ತನಿಖೆಗೆ ಸಂಪೂರ್ಣ ಸಹ­ಕಾರ ನೀಡಿದ್ದಾನೆ. ಘಟನೆ ನಡೆದಾಗ ಆತ ಮದ್ಯದ ಅಮಲಿನಲ್ಲಿ ಇದ್ದುದ್ದಾಗಿ ಹೇಳಿ­ದ್ದಾನೆ. ಬುದ್ಧಿ ಸ್ಥಿಮಿತದಲ್ಲಿ ಇಲ್ಲದಾಗ ಆದ ಅಪರಾಧಕ್ಕೆ ಗರಿಷ್ಠ ಶಿಕ್ಷೆ ನೀಡು­ವುದು ಉಚಿತವಲ್ಲ. ಈತನ ಪೋಷಕರು ಈಗಾಗಲೇ ಒಬ್ಬ ಮಗನನ್ನು ಕಳೆದು­ಕೊಂಡಿದ್ದಾರೆ. ಆದ್ದರಿಂದ ನ್ಯಾಯಾ­­­ಲಯ  ಈತನ ಬಗ್ಗೆ ದಯೆ ತೋರಬೇಕು’ ಎಂದು ವಿನಂತಿಸಿ­ಕೊಂಡರು.

ಪರಮ ನೀಚ ರಾಕ್ಷಸಿ ಕೃತ್ಯ: ಈ ಮನವಿಗಳನ್ನು ಖಂಡತುಂಡವಾಗಿ ವಿರೋಧಿ­­ಸಿದ ಕೃಷ್ಣನ್‌, ‘ನಾಲ್ವರೂ ಅಪರಾಧಿಗಳು ಅಸಹಾಯಕ  ಯುವತಿ ಮೇಲೆ ರಾಕ್ಷಸರಂತೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದಾರೆ. ಅವರ ಕೃತ್ಯ ಪರಮ ನೀಚತನದ್ದು. ಯಾವುದೇ ಕಾರಣಕ್ಕೂ  ಅನುಕಂಪಕ್ಕೆ ಅರ್ಹರಲ್ಲ. ಅವರು ಸುಧಾರಣೆ ಆಗಲಾರರು, ಅವರಿಗೆ ಗಲ್ಲು ಶಿಕ್ಷೆಯೇ ಸೂಕ್ತ. ಒಂದು ವೇಳೆ ನ್ಯಾಯಾಲಯ ಏನಾದರೂ ಮರಣ­­ದಂಡನೆಗಿಂತ ಕಡಿಮೆ ಶಿಕ್ಷೆ ವಿಧಿಸಿ­ದರೆ ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿ­ಸುತ್ತಿರುವ ಬಹುಸಂಖ್ಯೆಯ ಜನರು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ’ ಎಂದರು.

ಜೊತೆಗೆ, ‘ಸಾಮೂಹಿಕ ಅತ್ಯಾಚಾರ­ದಿಂದ ಸಂತ್ರಸ್ತೆ ಸಾವನ್ನಪ್ಪಿದರೆ ಅದು ಕೊಲೆಯೇ ಆಗುತ್ತದೆ. ಇಂತಹ ಪ್ರಕರಣದ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸಬಹುದು’ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪೊಂದನ್ನು ಉದಾಹರಿಸಿದರು.

ಕಲಾಪದ ಸಂದರ್ಭದಲ್ಲಿ ಮೂವರು ಅಪರಾಧಿಗಳು ನೇರ ದೃಷ್ಟಿಯಿಂದ ಕಲಾಪವನ್ನು ವೀಕ್ಷಿಸಿದರು. ಆದರೆ, ವಿನಯ್‌ ಮಾತ್ರ ಕಣ್ಣೀರು ಹಾಕುತ್ತಿದ್ದ.

ವಕೀಲರ ಮೇಲೆ ದಾಳಿ: ಕಲಾಪ ಮುಗಿದ ನಂತರ ಕೋರ್ಟ್‌ ಆವರಣದಿಂದ ಹೊರಬಂದ ಅಪರಾಧಿಗಳ ಪರ ಇಬ್ಬರು ವಕೀಲರ ಮೇಲೆ ಪ್ರತಿಭಟನಾಕಾರರ ಗುಂಪೊಂದು ದಾಳಿ ನಡೆಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT