ನವದೆಹಲಿ (ಪಿಟಿಐ): ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರ ನಿರ್ಗಮನದ ಬಗ್ಗೆ ಸರ್ಕಾರಕ್ಕೆ ಆತುರವಿಲ್ಲ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್ ಪಕ್ಷದ ಮೂಲಗಳು, ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ತೃಣಮೂಲ ಕಾಂಗ್ರೆಸ್ ಎಂದು ಸ್ಪಷ್ಟಪಡಿಸಿದೆ.
ಸಚಿವರ ರಾಜೀನಾಮೆ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್‌ನಲ್ಲಿಯೆ ಮರುಚಿಂತನೆ ನಡೆದಂತೆ ಕಾಣಿಸುತ್ತಿದೆ ಮತ್ತು ರೈಲ್ವೆ ಬಜೆಟ್ ಅಂಗೀಕಾರವಾಗುವವರೆಗೆ ಪರಿಸ್ಥಿತಿ ಇದೆ ರೀತಿ ಮುಂದುವರಿಯಬಹುದು ಎಂದು ಎಐಸಿಸಿ ವಕ್ತಾರ ಮನಿಶ್ ತಿವಾರಿ ತಿಳಿಸಿದ್ದಾರೆ.
ರೈಲ್ವೆ ಬಜೆಟ್ ಈಗ ಸಂಸತ್ ಆಸ್ತಿಯಾಗಿರುವುದರಿಂದ ಸಂಸತ್ತೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಪರೋಕ್ಷವಾಗಿ ಪ್ರಯಾಣ ದರ ಇಳಿಸುವಂತೆ ತೃಣಮೂಲ ಕಾಂಗ್ರೆಸ್ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ಇಂಗಿತ ವ್ಯಕ್ತಪಡಿಸಿದರು.
`ಯಾವ ಕ್ಷಣದಲ್ಲಾದರೂ ಬದಲಾವಣೆ~
ಯಾವುದೇ ಸಂದರ್ಭದಲ್ಲಾದರೂ ದಿನೇಶ್ ತ್ರಿವೇದಿ ಅವರ ಸಚಿವ ಸ್ಥಾನದ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ ಎಂದು ತೃಣಮೂಲ ಕಾಂಗ್ರೆಸ್‌ನ ಮುಖಂಡ ಸುದೀಪ್ ಬಂದೋಪಾಧ್ಯಾಯ ತಿಳಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಮತಾ ಬ್ಯಾನರ್ಜಿ ಮಧ್ಯೆ ಈ ಬಗ್ಗೆ ಮಾತುಕತೆ ಆಗಿದೆ. ಆದ್ದರಿಂದ ಯಾವುದೇ ಕ್ಷಣದಲ್ಲಾದರೂ ನಿರ್ಧಾರ ಹೊರಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ರೈಲ್ವೆ ಬಜೆಟ್ ಚರ್ಚೆಗೆ ಮೊದಲು ಅಥವಾ ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದುದು ಸರ್ಕಾರ ಎಂದು ಅವರು ತಿಳಿಸಿದ್ದಾರೆ.
ತ್ರಿವೇದಿ ಬದಲು ಮುಕುಲ್ ರಾಯ್ ನೇಮಕವಾಗಬೇಕು ಎಂಬುದು ಅಂತಿಮ ನಿರ್ಧಾರ. ಇದರಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಬಲ ಅಬಾಧಿತ: ಎಸ್‌ಪಿ ಸ್ಪಷ್ಟನೆ
ಬಾಹ್ಯ ಬೆಂಬಲವನ್ನು ಮುಂದುವರಿಸಲಾಗುವುದು ಎಂದು ಸಮಾಜವಾದಿ ಪಕ್ಷ ಸ್ಪಷ್ಟಪಡಿಸಿರುವುದರಿಂದ ತೃಣಮೂಲ ಕಾಂಗ್ರೆಸ್‌ನ ಕಿರಿಕಿರಿ ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಿರಾಳವಾಗಿದೆ.
ಒಮ್ಮೆ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದರೂ ತಮ್ಮ ಪಕ್ಷದ ಬಾಹ್ಯ ಬೆಂಬಲ ಮುಂದುವರಿಯುತ್ತದೆ ಎಂದು ಸಮಾಜವಾದಿ ಪಕ್ಷದ ಸಂಸದ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷವೂ ಸರ್ಕಾರದಲ್ಲಿ ಭಾಗಿಯಾಗಲಿದೆ ಎಂಬ ವರದಿಯನ್ನು ಅವರು ತಳ್ಳಿಹಾಕಿದ್ದಾರೆ.
ಸೋನಿಯಾ ಗಾಂಧಿ ಅವರ ಆದೇಶದಂತೆ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪವನ್ ಕುಮಾರ್ ಬನ್ಸಲ್ ಅವರು ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಭಾಗವಹಿಸಿರುವುದು ಎರಡೂ ಪಕ್ಷಗಳ ಸ್ನೇಹ ಭದ್ರವಾಗಲು ಸಹಾಯಕವಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.