ADVERTISEMENT

`ಆದೇಶಕ್ಕೆ ಬದ್ಧ'

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ನವದೆಹಲಿ: `ನ್ಯಾಯಾಲಯದ ಆದೇಶದಂತೆ ಡಿಸೆಂಬರ್ 5ರಿಂದಲೇ ತಮಿಳುನಾಡಿಗೆ 10,000 ಕ್ಯೂಸೆಕ್ ಕಾವೇರಿ ನೀರು ಬಿಡಲು ಸಾಧ್ಯವಾಗಲಿಲ್ಲ. ಹಾಗಾಗಿ ಸೋಮವಾರದ ವರೆಗೂ ನೀರು ಬಿಡಲು ಸಿದ್ಧ' ಎಂದು ಕರ್ನಾಟಕ ಶುಕ್ರವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

`ಕರ್ನಾಟಕವು ಕೋರ್ಟ್ ಆದೇಶದಂತೆ ಡಿಸೆಂಬರ್ 5ರಿಂದ ನೀರು ಬಿಟ್ಟಿಲ್ಲ. ಹಾಗಾಗಿ ಒಟ್ಟು ನೀರಿನ ಪ್ರಮಾಣದಲ್ಲಿ ಕೊರತೆ ಆಗಬಹುದು' ಎಂದು ತಮಿಳುನಾಡು ಪರ ಹಿರಿಯ ವಕೀಲ ಸಿ.ಎನ್. ವೈದ್ಯನಾಥನ್ ದೂರಿದರು.

`ಡಿಸೆಂಬರ್ 5ರಿಂದಲೇ ನೀರು ಬಿಡಲು ಸಾಧ್ಯವಾಗದಿರುವುದಕ್ಕೆ ಕರ್ನಾಟಕದ ಪರವಾಗಿ ವಿಷಾದ ವ್ಯಕ್ತಪಡಿಸಿದ ಹಿರಿಯ ವಕೀಲ ಫಾಲಿ ಎಸ್. ನಾರಿಮನ್, `ಡಿಸೆಂಬರ್ 6ರಿಂದ ಆದೇಶ ಪಾಲಿಸಲಾಗುತ್ತಿದೆ. ಸೋಮವಾರದವರೆಗೂ (ಹೆಚ್ಚುವರಿಯಾಗಿ ಒಂದು ದಿನ) ನೀರು ಬಿಡಲಾಗುತ್ತದೆ' ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಜೈನ್ ಹಾಗೂ ಮದನ್ ಬಿ. ಲೋಕುರ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.

ಡಿಸೆಂಬರ್ 5ರಂದು ಆದೇಶ ನೀಡಿದ ದಿನದಿಂದಲೇ  ನೀರು ಬಿಡಬೇಕೆಂದು ಸುಪ್ರೀಂಕೋರ್ಟ್ ಕರ್ನಾಟಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೇ ಎರಡೂ ರಾಜ್ಯಗಳಿಗೆ ಅಗತ್ಯವಿರುವ ನೀರಿನ ಪ್ರಮಾಣವನ್ನು ನಿರ್ಧರಿಸಲು ಡಿ. 6 ಹಾಗೂ 7ರಂದು ಸಭೆ ಸೇರುವಂತೆ ಕಾವೇರಿ ನಿರ್ವಹಣಾ ಸಮಿತಿಗೆ (ಸಿಎಂಸಿ) ಸೂಚನೆ ನೀಡಿತ್ತು.

ಸಾಂಬಾ ಬೆಳೆ ರಕ್ಷಣೆಗೆ ಕನಿಷ್ಠ 30 ಟಿಎಂಸಿ ಅಡಿ ನೀರು ಬಿಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ ಮನವಿಯ ವಿಚಾರಣೆ ಸೋಮವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.