ADVERTISEMENT

ಆನಂದಿಬೆನ್ ರಾಜೀನಾಮೆ

ಅಮಿತ್‌ ಷಾಗೆ ಹೊಸ ನಾಯಕನ ಆಯ್ಕೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 20:16 IST
Last Updated 3 ಆಗಸ್ಟ್ 2016, 20:16 IST
ಆನಂದಿಬೆನ್ ರಾಜೀನಾಮೆ
ಆನಂದಿಬೆನ್ ರಾಜೀನಾಮೆ   

ಗಾಂಧಿನಗರ/ ನವದೆಹಲಿ (ಪಿಟಿಐ):  ಮುಖ್ಯಮಂತ್ರಿ ಹುದ್ದೆ ತ್ಯಜಿಸಲು ಆನಂದಿ ಬೆನ್ ಪಟೇಲ್ ಅವರು ಸಲ್ಲಿಸಿದ್ದ ಕೋರಿಕೆ ಯನ್ನು ಬಿಜೆಪಿ ಸಂಸದೀಯ ಮಂಡಳಿ ಒಪ್ಪಿಕೊಂಡ ಬೆನ್ನಲ್ಲೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

ಸಚಿವ ಸಹೋದ್ಯೋಗಿಗಳು ಮತ್ತು ಪಕ್ಷದ ಮುಖಂಡರ ಜತೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಒ. ಪಿ. ಕೊಹ್ಲಿ ಅವರಿಗೆ  ಅವರು ರಾಜೀನಾಮೆ ಪತ್ರ ಸಲ್ಲಿಸಿದರು.ಬದಲಿ ವ್ಯವಸ್ಥೆ ಆಗುವವರೆಗೆ ಮುಖ್ಯ ಮಂತ್ರಿ ಹುದ್ದೆಯಲ್ಲಿ ಮುಂದು ವರಿಯು ವಂತೆ ರಾಜ್ಯಪಾಲರು ಆನಂದಿ ಬೆನ್ ಅವರಿಗೆ ಸೂಚಿಸಿದರು.

2017ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸಾಮರ್ಥ್ಯವಿರುವ ನಾಯಕನನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವ ಅಧಿಕಾರವನ್ನು ಸಂಸದೀಯ ಮಂಡಳಿಯು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ನೀಡಿದೆ.

ಅಮಿತ್‌ ಷಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗವಹಿಸಿದ್ದರು.  ಮುಂದಿನ ಮುಖ್ಯ ಮಂತ್ರಿ ಆಯ್ಕೆಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಸಂಸದೀಯ ಮಂಡಳಿಯು ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ ಅವರನ್ನು ಪಕ್ಷದ ಕೇಂದ್ರ ವೀಕ್ಷಕರನ್ನಾಗಿ ನೇಮಕ ಮಾಡಿದೆ.

ಗುರುವಾರ ಗುಜರಾತ್‌ಗೆ ತೆರಳಲಿ ರುವ ಷಾ ಅವರು ಪಕ್ಷದ ಮುಖಂಡರ ಜತೆ ಸಮಾಲೋಚಿ ಸಲಿದ್ದಾರೆ. ನಂತರ ಹೊಸ ನಾಯಕನ ಆಯ್ಕೆಗೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ವೀಕ್ಷಕರ ಜತೆ ಭಾಗವಹಿಸಲಿದ್ದಾರೆ.

75 ವರ್ಷ ಆಗುತ್ತಿರುವುದರಿಂದ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವು ದಾಗಿ ಆನಂದಿಬೆನ್ ಸೋಮವಾರ ತಿಳಿಸಿ ದ್ದರು. ಗುಜರಾತ್‌ನ  ಪ್ರಥಮ ಮಹಿಳಾ ಮುಖ್ಯಮಂತ್ರಿ ಆನಂದಿಬೆನ್ ಹುದ್ದೆ ತ್ಯಜಿಸುವ ನಿರ್ಧಾರ ಅನಿರೀಕ್ಷಿತವೇನೂ ಆಗಿರಲಿಲ್ಲ.

ಹೊಸ ನಾಯಕನ ಆಯ್ಕೆಗೆ ನಡೆಯ ಬೇಕಾದ ಶಾಸಕಾಂಗ ಪಕ್ಷದ ಸಭೆಯ ದಿನಾಂಕ ಮತ್ತು ಸಮಯ ಇನ್ನೂ ನಿರ್ಧಾರವಾಗಿಲ್ಲ. ಒಂದೆರಡು ದಿನಗಳಲ್ಲಿ ಹೊಸ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ತೀರ್ಮಾನವಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಆರೋಗ್ಯ ಸಚಿವ ನಿತಿನ್ ಪಟೇಲ್, ಕೇಂದ್ರ ಸಚಿವ ಪುರುಷೋತ್ತಮ ರೂಪಾಲಾ ಮತ್ತು ಸ್ಪೀಕರ್ ಗಣಪತ್ ವಾಸ್ವಾ ಅವರಲ್ಲಿ ಒಬ್ಬರು ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.