ADVERTISEMENT

ಆರುಷಿ ಕೊಲೆ ಪ್ರಕರಣ: ಫೆ.4ರ ವರೆಗೆ ರಾಜೇಶ್ ತಲ್ವಾರ್ ಬಂಧನ ಇಲ್ಲ- ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 10:35 IST
Last Updated 9 ಜನವರಿ 2012, 10:35 IST

ನವದೆಹಲಿ (ಪಿಟಿಐ): ಪುತ್ರಿ ಆರುಷಿ ಮತ್ತು ಸೇವಕ ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂತವೈದ್ಯ ರಾಜೇಶ್ ತಲ್ವಾರ್ ಅವರ ಜಾಮೀನನ್ನು ಫೆಬ್ರುವರಿ 4ರವರೆಗೆ ವಿಸ್ತರಿಸಿರುವ ಸುಪ್ರೀಂಕೋರ್ಟ್ ಫೆಬ್ರುವರಿ 4ರಂದು ಗಾಜಿಯಾಬಾದ್ ನ್ಯಾಯಾಲಯದಲ್ಲಿ ತನ್ನ ಪತ್ನಿ ನೂಪುರ್ ಜೊತೆಗೆ ಕೊಲೆ ಪ್ರಕರಣದ ವಿಚಾರಣೆ ಎದುರಿಸಲು ಹಾಜರಾಗುವವರೆಗೆ ತಲ್ವಾರ್ ಅವರನ್ನು ಬಂಧಿಸಬಾರದು ಎಂದು ಎಂದು ಆಜ್ಞಾಪಿಸಿದೆ.

ನ್ಯಾಯಮೂರ್ತಿ ಎ.ಕೆ. ಗಂಗೂಲಿ ಮತ್ತು ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರನ್ನು ಒಳಗೊಂಡ ಪೀಠವು ಜಾಮೀನು ನೀಡಿಕೆಗೆ ಸಂಬಂಧಿಸಿದ ಯಾವುದೇ ವಿಚಾರಣೆಯನ್ನು ಫೆಬ್ರುವರಿ 4ರಂದು ವಿಚಾರಣೆ ಕೈಗೆತ್ತಿಕೊಳ್ಳಲಿರುವ ಗಾಜಿಯಾಬಾದ್ ನ್ಯಾಯಾಲಯ ನಿರ್ಧರಿಸುವುದು ಎಂದು ಹೇಳಿತು.

ದಂತವೈದ್ಯ ತಲ್ವಾರ್ ಅವರು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸದೆ ನಗರ ಬಿಟ್ಟು ಹೊರ ಹೋಗುವಂತಿಲ್ಲ ಮತ್ತು ಅವರ ಪಾಸ್ ಪೋರ್ಟ್ ಮ್ಯಾಜಿಸ್ಟ್ರೇಟರ ಸುಪರ್ದಿಯಲ್ಲಿ ಇರಬೇಕು ಎಂದೂ ಪೀಠವು ಸೂಚಿಸಿತು.

ಏನಿದ್ದರೂ ಈ ವಿಚಾರದಲ್ಲಿ ಯಾವುದೇ ಅರ್ಜಿ ಸಲ್ಲಿಸಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು  ಸುಪ್ರೀಂಕೋರ್ಟ್ ಸಿಬಿಐಗೆ  ಅನುಮತಿ ನೀಡಿತು.

ತಮ್ಮ ಕಕ್ಷಿದಾರರು ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ 4ರಂದು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎಂದು ರಾಜೇಶ್ ಪರ ವಕೀಲ ಹರೀಶ ಸಾಳ್ವೆ ನ್ಯಾಯಾಲಯಕ್ಕೆ ತಿಳಿಸಿದರು.

ತಲ್ವಾರ ದಂಪತಿಯ ಪುತ್ರಿ ಆರುಷಿ (14) ಕುಟುಂಬದ ನೋಯ್ಡಾ ಮನೆಯಲ್ಲಿ 2008ರ ಮೇ 15-16ರ ನಡುವಣ ರಾತ್ರಿ ಮೃತಳಾಗಿ ಬಿದ್ದಿದ್ದುದು ಪತ್ತೆಯಾಗಿತ್ತು. ಗಂಟಲು ಸೀಳಿದ ಸ್ಥಿತಿಯಲ್ಲಿ ಆಕೆಯ ಶವ ಕಂಡು ಬಂದಿತ್ತು. ಮರುದಿನ ಕಟ್ಟಡದ ತಾರಸಿಯಲ್ಲಿ ಮನೆಯ ಸೇವಕ ಹೇಮರಾಜ್ ಶವವೂ ಪತ್ತೆಯಾಗಿತ್ತು.

9ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಪುತ್ರಿ ಆರುಷಿ ಮತ್ತು ಸೇವಕ ಹೇಮರಾಜ್ ಕೊಲೆ ಪ್ರಕರಣದ ವಿಚಾರಣೆ ಎದುರಿಸುವಂತೆ ಸುಪ್ರೀಂಕೋರ್ಟ್ ಜನವರಿ 6ರಂದು ಈ ವೈದ್ಯ ದಂಪತಿಗೆ ಆಜ್ಞಾಪಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.