ADVERTISEMENT

ಆಹಾರ ಭದ್ರತಾ ಮಸೂದೆ: ಯೋಜನಾ ಆಯೋಗ ಅಪಸ್ವರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ನವದೆಹಲಿ: ಸುಗ್ರೀವಾಜ್ಞೆ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಮಸೂದೆ ಜಾರಿಗೊಳಿಸಲು ತೀರ್ಮಾನ ಕೈಗೊಂಡಿರುವುದಕ್ಕೆ ವಿರೋಧ ಪಕ್ಷಗಳಿಂದ ಕಟು ಟೀಕೆಗೆ ಒಳಗಾಗಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಇದೀಗ ಯೋಜನಾ ಆಯೋಗದಿಂದ ಅಪಸ್ವರ ಕೇಳಿ ಬಂದಿದೆ.

`ಇಂತಹ ಯೋಜನೆಗಳಿಗೆ ಯಥೇಚ್ಛವಾಗಿ ಹಣ ವೆಚ್ಚ ಮಾಡುವುದರಿಂದ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಲು ಕಾರಣವಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಭಾರತದ ಒಟ್ಟು ಸರಾಸರಿ ಆರ್ಥಿಕ ಬೆಳವಣಿಗೆ ಕುಸಿಯುತ್ತಾ ಹೋಗುತ್ತದೆ' ಎಂದು ಯೋಜನಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಕೇಂದ್ರದ ಕ್ರಮಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

ಆಹಾರ ಭದ್ರತಾ ಮಸೂದೆ ಜಾರಿಗೆ ತರುವಾಗ ಸರ್ಕಾರ 12ನೇ ಪಂಚವಾರ್ಷಿಕ ಯೋಜನೆಗಳಲ್ಲಿ ಉಲ್ಲೇಖಿಸಲಾಗಿರುವ ಹೆಚ್ಚಿನ ಆರ್ಥಿಕ ಸುಸ್ಥಿರ ಬೆಳವಣಿಗೆಯಂತಹ ಅಂಶಗಳನ್ನು ಕಡೆಗಣಿಸಲಾಗಿದೆ ಎಂದೂ ಹೇಳಿದ್ದಾರೆ.


`ಯಾವುದೇ ಯೋಜನೆಗೆ ಹಣ ವ್ಯಯ ಮಾಡುವ ಅಥವಾ ಸಬ್ಸಿಡಿ ನೀಡುವ ಬದಲಾಗಿ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ್ದಾಗಿರುವ ರಸ್ತೆ ಸಂಪರ್ಕ, ಶಾಲೆ, ಆರೋಗ್ಯ ಮತ್ತು ವಿದ್ಯುತ್ ಸೌಕರ್ಯ ಕಲ್ಪಿಸುವುದಕ್ಕೆ ಹೆಚ್ಚಿನ ಒತ್ತು ನೀಡುವ ಕುರಿತು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ' ಎಂಬ ಅಂಶದ ಬಗ್ಗೆ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT