ADVERTISEMENT

ಆ್ಯಸಿಡ್ ದಾಳಿಗೆ 10 ವರ್ಷ ಶಿಕ್ಷೆ: ಕರಡು ವಿಧೇಯಕಕ್ಕೆ ಕೇಂದ್ರ ಸಂಪುಟ ಅಸ್ತು

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST
ಆ್ಯಸಿಡ್ ದಾಳಿಗೆ 10 ವರ್ಷ ಶಿಕ್ಷೆ: ಕರಡು ವಿಧೇಯಕಕ್ಕೆ ಕೇಂದ್ರ ಸಂಪುಟ ಅಸ್ತು
ಆ್ಯಸಿಡ್ ದಾಳಿಗೆ 10 ವರ್ಷ ಶಿಕ್ಷೆ: ಕರಡು ವಿಧೇಯಕಕ್ಕೆ ಕೇಂದ್ರ ಸಂಪುಟ ಅಸ್ತು   

ನವದೆಹಲಿ (ಪಿಟಿಐ):  ಮಹಿಳೆಯರ ಮೇಲಿನ ಆ್ಯಸಿಡ್ ದಾಳಿಯನ್ನು ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾದ ಪ್ರತ್ಯೇಕ ಅಪರಾಧ ಎಂದು ಪರಿಗಣಿಸುವ ಕರಡು ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅಂಗೀಕಾರ ನೀಡಿದೆ.

ಇದುವರೆಗೆ ಆ್ಯಸಿಡ್ ದಾಳಿ ಅಪರಾಧದ ಬಹುತೇಕ ಪ್ರಕರಣಗಳಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) 326, 306ನೇ ಸೆಕ್ಷನ್‌ಗಳಡಿ ಎರಡು ಅಥವಾ ಮೂರು ವರ್ಷ ಸೆರೆವಾಸ ವಿಧಿಸಲಾಗುತ್ತಿತ್ತು.

ಈ ನಿಟ್ಟಿನಲ್ಲಿ ಸಮಗ್ರ ಪ್ರಮಾಣಪತ್ರ ಸಲ್ಲಿಸಬೇಕೆಂದು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನವನ್ನೂ ನೀಡಿತ್ತು. ಜತೆಗೆ, ಈ ಸಂಬಂಧದಲ್ಲಿ 2011ರ ಫೆಬ್ರುವರಿಯಲ್ಲಿ ಕೋರ್ಟ್ ನೀಡಿದ್ದ ಸೂಚನೆಗೆ ತಮ್ಮ ಉತ್ತರಗಳನ್ನು ನೀಡಬೇಕೆಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿತ್ತು.

ADVERTISEMENT

ಅತ್ಯಾಚಾರಕ್ಕೆ ಹೊಸ ವ್ಯಾಖ್ಯೆ:  `ಅತ್ಯಾಚಾರ~ ಎಂಬ ಪದವನ್ನು `ಲಿಂಗ ಭೇದ~ದಿಂದ ಮುಕ್ತಗೊಳಿಸಿ, ಸಂಪುಟ ನಿರ್ಧಾರ ಕೈಗೊಂಡಿದೆ.

`ಅತ್ಯಾಚಾರ~ ಎಂಬ ಪದಕ್ಕೆ ಬದಲಾಗಿ `ಲೈಂಗಿಕ ಹಲ್ಲೆ~ ಎಂಬ ಪದಗುಚ್ಛವನ್ನು ಬಳಸಲು ಅಂಗೀಕಾರದ ಮುದ್ರೆ ಒತ್ತಲಾಗಿದೆ. ಅಂದರೆ, `ಲೈಂಗಿಕ ಹಲ್ಲೆ~ ಎಂಬುದು ಇನ್ನು ಮುಂದೆ ಕೇವಲ ಮಹಿಳೆಯರ ಸಂದರ್ಭದಲ್ಲಿ ಮಾತ್ರವಲ್ಲದೆ, ಪುರುಷರ ಮೇಲೆ ಅಂತಹ ಹಲ್ಲೆ ನಡೆದ ಸಂದರ್ಭದಲ್ಲೂ ಪರಿಗಣನೆಗೆ ಬರಲಿದೆ. ಈ ಎರಡೂ ಸಂದರ್ಭಗಳಲ್ಲಿ, ಒಂದೇ ರೀತಿಯ ಕಾನೂನು ಅನ್ವಯವಾಗಲಿದೆ.

ಪ್ರಸ್ತುತ `ಅತ್ಯಾಚಾರ~ದ ವ್ಯಾಖ್ಯೆ ಭಾರತೀಯ ದಂಡ ಸಂಹಿತೆಯ 375ನೇ ಸೆಕ್ಷನ್‌ನಲ್ಲಿ ಅಡಕವಾಗಿದೆ. `ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಪುರುಷ ಲೈಂಗಿಕ ಸಂಪರ್ಕ ನಡೆಸಿದ್ದೇ ಆದರೆ ಅದು `ಅತ್ಯಾಚಾರ~ವಾಗುತ್ತದೆ ಎಂಬ ವ್ಯಾಖ್ಯೆ ಅದರಲ್ಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣ ತೀರ್ಥ ಸುದ್ದಿಗಾರರೊಂದಿಗೆ ಮಾತನಾಡಿ ಮೇಲಿನ ಎರಡು ಕರಡು ವಿಧೇಯಕಗಳಿಗೆ ಸಂಪುಟ ಅನುಮೋದನೆ ನೀಡಿರುವುದನ್ನು ತಿಳಿಸಿದರು.

ಪ್ರಸ್ತುತ, ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕೆಲವು ಸೆಕ್ಷನ್‌ಗಳಲ್ಲಿ, 16 ವರ್ಷಕ್ಕಿಂತ ಕಡಿಮೆ ವಯಸ್ಸನ್ನು `ಅಪ್ರಾಪ್ತ ವಯಸ್ಸು~ ಎಂದು ಪರಿಗಣಿಸಲು ಅವಕಾಶವಿದೆ. ಇದನ್ನು ಬದಲಾಯಿಸಿ, ಎಲ್ಲ ಸಂದರ್ಭಗಳಲ್ಲೂ 18 ವರ್ಷಕ್ಕಿಂತ ಕಡಿಮೆ ವಯಸ್ಸನ್ನು `ಅಪ್ರಾಪ್ತ ವಯಸ್ಸು~ ಎಂದು ತಿದ್ದುಪಡಿ ಮಾಡಲು ಕೂಡ ಸಚಿವ ಸಂಪುಟ ತೀರ್ಮಾನಿಸಿದೆ ಎಂದೂ ಸಚಿವೆ ತಿಳಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶನ

ಮಹಿಳೆಯರ ಮೇಲಿನ ಆ್ಯಸಿಡ್ ದಾಳಿ ನಿಯಂತ್ರಣಕ್ಕಾಗಿ ರಾಷ್ಟ್ರದಲ್ಲಿ ಆ್ಯಸಿಡ್ ಮಾರಾಟ ತಡೆಗೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳುವ ಮೂಲಕ ಸುಪ್ರೀಂಕೋರ್ಟ್ ಜುಲೈ 3ರಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿತ್ತು.

ಆ್ಯಸಿಡ್ ದಾಳಿಗೆ ಒಳಗಾದವರಿಗೆ ಸೂಕ್ತ ಪರಿಹಾರ, ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದಾದರೂ ಯೋಜನೆ ರೂಪಿಸಿದೆಯೇ ಎಂದೂ ಸುಪ್ರೀಂಕೋರ್ಟ್ ಕೇಳಿತ್ತು. ಆ್ಯಸಿಡ್ ಮಾರಾಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 29ರಂದು ಸೂಚನೆ ನೀಡಿದ್ದ  ಸುಪ್ರೀಂಕೋರ್ಟ್, ವಿವಿಧ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಸಾಧಿಸಿ ಆ್ಯಸಿಡ್ ಮಾರಾಟಕ್ಕೆ ಯೋಜನೆ ರೂಪಿಸುವಂತೆ ಗೃಹ ಸಚಿವಾಲಯಕ್ಕೂ ನಿರ್ದೇಶನ ನೀಡಿತ್ತು.

ವಾಣಿಜ್ಯ ಹಾಗೂ ವೈಜ್ಞಾನಿಕ ಉದ್ದೇಶಗಳಿಗೆ ಹೊರತುಪಡಿಸಿ ಆ್ಯಸಿಡ್ ಮಾರಾಟ ಹಾಗೂ ವಿತರಣೆ ನಿಷೇಧಿಸಬೇಕು ಎಂದು 2009ರ ಜುಲೈನಲ್ಲಿ ಕಾನೂನು ಆಯೋಗ ಸಲ್ಲಿಸಿರುವ ತನ್ನ 226ನೇ ವರದಿಯಲ್ಲಿ ಶಿಫಾರಸು ಮಾಡಿದೆ.

ಆ್ಯಸಿಡ್ ಖರೀದಿದಾರರ ವಿವರಗಳನ್ನು ದಾಖಲು ಮಾಡಿಕೊಳ್ಳಬೇಕೆಂಬ ಶಿಫಾರಸನ್ನೂ ಅದು ಮಾಡಿದೆ. ಈ ಮಧ್ಯೆ `1973ರ ಅಪರಾಧ ದಂಡ ಪ್ರಕ್ರಿಯೆ ಸಂಹಿತೆ~ಯನ್ನು 2009ರಲ್ಲಿ ತಿದ್ದುಪಡಿ ಮಾಡಿ ಸೆಕ್ಷನ್ 357ಎ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.