ADVERTISEMENT

ಇನ್ನೂ ಕಿರಿಯ ದೀದಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

ಕೋಲ್ಕತ್ತ (ಪಿಟಿಐ): ಭೂಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರ ಜನ್ಮದಿನಾಂಕ ವಿವಾದ ಇನ್ನೂ ಬಗೆಹರಿಯದಿರುವಾಗಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಈಗ ಇದೇ ಬಗೆಯ ವಿವಾದಕ್ಕೆ ಗುರಿಯಾಗಿದ್ದಾರೆ.

ಅಧಿಕೃತ ದಾಖಲೆಯಲ್ಲಿ ನಮೂದಾಗಿರುವುದಕ್ಕಿಂತಲೂ `ದೀದಿ~ ಐದು ವರ್ಷ ಕಿರಿಯವರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಪ್ರಕಟಗೊಂಡ ತಮ್ಮ `ಮರೆಯಲಾಗದ ನನ್ನ ನೆನಪುಗಳು~ ಎಂಬ ಪುಸ್ತಕದಲ್ಲಿ ಅವರೇ ಸ್ವತಃ ಇದನ್ನು ಸ್ಪಷ್ಟಪಡಿಸಿದ್ದಾರೆ. `ಅಧಿಕೃತ ದಾಖಲೆ ಪ್ರಕಾರ ನನಗೆ 57ರ ಹರೆಯ. ಆದರೆ ಶಾಲೆಯ ಅಂತಿಮ ಪರೀಕ್ಷೆ ಬರೆಯುವ ವೇಳೆಗೆ ನನಗೆ 15 ವರ್ಷವೂ ತುಂಬಿರಲಿಲ್ಲ. ಪರೀಕ್ಷೆಯಿಂದ ನನ್ನನ್ನು ಅನರ್ಹಗೊಳಿಸದಿರಲು ನನ್ನ ತಂದೆ ನನ್ನ ಪ್ರಾಯವನ್ನು ಐದು ವರ್ಷ ಹೆಚ್ಚಿಗೆ ಸೂಚಿಸುವ ನಕಲಿ ದಾಖಲೆಯನ್ನು ನೀಡಿದ್ದರು~ ಎಂದು ಬರೆದುಕೊಂಡಿದ್ದಾರೆ.

`ಅಧಿಕೃತ ದಾಖಲೆಯ ಪ್ರಕಾರ ನನ್ನ ಜನ್ಮದಿನಾಂಕ ಜನವರಿ 5, 1955. ಲೋಕಸಭೆಯ ವೆಬ್‌ಸೈಟ್‌ನಲ್ಲೂ ಇದೇ ದಿನಾಂಕ ನಮೂದಾಗಿದೆ. ಆದರೆ ನನ್ನ ನಿಜವಾದ ಜನ್ಮದಿನಾಂಕ ಅಕ್ಟೋಬರ್ 5. ನನ್ನ ತಾಯಿ ನನಗೆ ನೀಡಿದ್ದ ಜಾತಕದಲ್ಲಿ ಇದನ್ನು ಸೂಚಿಸಿದ್ದರು. ಜತೆಗೆ ಪ್ರತಿ ಅಷ್ಟಮಿಯಂದು (ಅಕ್ಟೋಬರ್‌ನಲ್ಲಿ ಬರುವ ದುರ್ಗಾ ಪೂಜೆಯ ಎಂಟನೇ ದಿನ) ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದರು~ ಎಂದು ತಿಳಿಸಿದ್ದಾರೆ.

ಈ ಕುರಿತು ಒಮ್ಮೆ ತಾಯಿಯ ಜತೆ ಜಗಳವಾಡಿದಾಗ, ಅವರು `ಮಗು ಸರಿಯಾದ ದಿನಾಂಕ ನಮೂದಿಸಲು ನಾವೇನೂ ನಗರವಾಸಿಗಳಲ್ಲ. ನೀನು  ಮತ್ತು ಸಹೋದರ ಇಬ್ಬರೂ ಮನೆಯಲ್ಲಿಯೇ ಜನಿಸಿದ್ದರಿಂದ ಜನ್ಮದಿನಾಂಕದ ಕುರಿತು ದಾಖಲೆಗಳನ್ನು ನಾನು ಎಲ್ಲಿಂದ ತರಲಿ?~ ಎಂದು ಪ್ರಶ್ನಿಸಿದ್ದರು ಎಂದು ಸ್ಮರಿಸಿದ್ದಾರೆ.

ಆದರೆ ಅದೇನೇ ಇದ್ದರೂ ಅದು ನನ್ನ ವೈಯಕ್ತಿಕ ವಿಚಾರ. ಮೊದಲನೆಯದಾಗಿ ನಾನು ಹುಟ್ಟಿದ ದಿನವನ್ನೇನೂ ಆಚರಿಸುವುದಿಲ್ಲ. ಅಷ್ಟೇ ಅಲ್ಲ, ಹಳ್ಳಿಗಳಲ್ಲಿ ಜನಿಸುವ ಸಾವಿರಾರು ಮಕ್ಕಳು ಇದೇ  ಸಮಸ್ಯೆ ಎದುರಿಸುತ್ತಿರುವಾಗ ನನ್ನ ಸಮಸ್ಯೆ ವಿಶೇಷವಾದುದಲ್ಲ ಎಂದು ಹೇಳಿದ್ದಾರೆ.

`ನಿಜವಾದ ಜನ್ಮ ದಿನಾಂಕವನ್ನು ಜನರಿಗೆ ತಿಳಿಸಲು ಇದನ್ನು ಬಹಿರಂಗಪಡಿಸುತ್ತಿದೇನೆಯೇ ಹೊರತು ವಿವಾದ ಹುಟ್ಟಿಸಲು ಅಲ್ಲ~ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.