ನವದೆಹಲಿ (ಪಿಟಿಐ): ಇಸ್ರೇಲ್ ರಾಜತಾಂತ್ರಿಕರೊಬ್ಬರ ಮೇಲೆ ಕಳೆದ ತಿಂಗಳು ಇಲ್ಲಿ ಉಗ್ರಗಾಮಿ ದಾಳಿ ನಡೆಸಿದ ಶಂಕಿತರಲ್ಲಿ ಮೂವರು ಇರಾನಿಯನ್ನರನ್ನು ತನಿಖಾಧಿಕಾರಿಗಳು ಗುರುತಿಸಿರುವುದರಿಂದ, ಎಲ್ಲ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ಸಹಕರಿಸುವಂತೆ ಇರಾನ್ ನೆರವನ್ನು ಭಾರತ ಕೋರಿದೆ.
ಆದರೆ ಈ ತನಿಖೆಯ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರಕ್ಕೆ ಬರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ದಾಳಿ ಕುರಿತ ತನಿಖೆ ಪ್ರಗತಿಯಲ್ಲಿದೆ ಎಂದಷ್ಟೇ ವಿದೇಶಾಂಗ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
`ಪುರಾವೆ ಇತ್ತು~: ಇಸ್ರೇಲ್ ರಾಯಭಾರ ಕಚೇರಿ ಸಿಬ್ಬಂದಿಯನ್ನು ಗುರಿಯಾಗಿಟ್ಟುಕೊಂಡು ಇಲ್ಲಿ ನಡೆಸಲಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪತ್ರಕರ್ತನ ಪಾತ್ರ ಇರುವ ಕುರಿತು ಪುರಾವೆ ಸಿಕ್ಕಿದ ಕಾರಣದಿಂದಲೇ ಆತನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬಂಧಿತ ಪತ್ರಕರ್ತನಿಗೆ ಇರಾನ್ ಪ್ರಜೆಯೊಂದಿಗೆ ಸಂಪರ್ಕ ಇತ್ತು. ಆ ವ್ಯಕ್ತಿಯು ಬ್ಯಾಂಕಾಕ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಮುಖ್ಯ ದಾಳಿಕೋರನ ಜೊತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ ದಾಳಿಗೆ ಸಂಚು ರೂಪಿಸಿದವರಲ್ಲಿ ಬಂಧಿತ ಸೈಯದ್ ಮೊಹಮ್ಮದ್ ಅಹ್ಮದ್ ಕಾಜ್ಮಿ ಕೂಡ ಒಬ್ಬ. ಈತ ಹಣ ಮತ್ತು ಸಿದ್ಧಾಂತಗಳ ಕಾರಣಕ್ಕೆ ಈ ಕೃತ್ಯ ಎಸೆಗಿರಬಹುದು ಎಂದು ಮೂಲಗಳು ಹೇಳಿವೆ.
ಇರಾನ್ ಪತ್ರಿಕೆಗೆ ಬಾತ್ಮೀದಾರನಾಗಿದ್ದ ದೆಹಲಿ ದಕ್ಷಿಣ ಭಾಗದ ನಿವಾಸಿಯಾದ ಹವ್ಯಾಸಿ ಪತ್ರಕರ್ತ ಸೈಯದ್ ಮೊಹಮ್ಮದ್ ಅಹ್ಮದ್ ಕಾಜ್ಮಿಯನ್ನು ಮಾರ್ಚ್ 6ರಂದು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.