ADVERTISEMENT

ಇಸ್ರೊಗೂ ಸಿಎಜಿ ಚಾಟಿ!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಬಾಹ್ಯಾಕಾಶ ಕಕ್ಷೆಯಲ್ಲಿ ಭಾರತದ ಉಪಗ್ರಹಗಳ ನಿಲುಗಡೆಗೆ ಮೀಸಲಾಗಿದ್ದ ಜಾಗವನ್ನು ವಿದೇಶಿ ಖಾಸಗಿ ಉಪಗ್ರಹಗಳ ನಿಲುಗಡೆಗೆ ಅವಕಾಶ ನೀಡಿದ ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವನ್ನು (ಇಸ್ರೊ) ಮಹಾಲೇಖಪಾಲರು ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿದೇಶಿ ಖಾಸಗಿ ಸಂಸ್ಥೆಯ ಉಪಗ್ರಹ ನಿಲುಗಡೆಗೆ ಇಸ್ರೊ ಅಕ್ರಮವಾಗಿ ಅವಕಾಶ ಮಾಡಿಕೊಟ್ಟಿರುವುದು ದೇಶದ ಉಪಗ್ರಹ ಸಂಪರ್ಕ ನೀತಿ (ಸ್ಯಾಟ್‌ಲೈಟ್ ಕಮ್ಯುನಿಕೇಷನ್-ಸ್ಯಾಟ್‌ಕಾಮ್)ಯ ಸ್ಪಷ್ಟ ಉಲ್ಲಂಘನೆಯಾಗಿದೆ. ವಿದೇಶಿ ಸಂಸ್ಥೆ ಇಸ್ರೊದ ಈ ನಿರ್ಧಾರದಿಂದ ಅಕ್ರಮ ಲಾಭ ಪಡೆದಿದೆ ಎಂದು ಕುಟುಕಿದೆ.

ವಿಜ್ಞಾನ ಮತ್ತು ಪರಿಸರ ಸಚಿವಾಲಯ ಮತ್ತು ಇಲಾಖೆಗಳಿಗೆ ಸಂಬಂಧಿಸಿದ ಮಹಾಲೇಖಪಾಲರ ಇತ್ತೀಚಿನ ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಶೈಕ್ಷಣಿಕ ಉದ್ದೇಶಗಳ ಎಜ್ಯುಸ್ಯಾಟ್ ತರಂಗಾತರ ಹಂಚಿಕೆ ಮತ್ತು `ಇ-ಲರ್ನಿಂಗ್' ಯೋಜನೆಯ ನಿಗಾ ವಹಿಸುವಲ್ಲಿಯ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಾರೆ. ಮಹತ್ವದ ವೈಜ್ಞಾನಿಕ ಸಂಸ್ಥೆಗಳ ದುರ್ಬಲ ನಿರ್ವಹಣೆಯಿಂದಾಗಿ ಉದ್ದೇಶ ಈಡೇರುತ್ತಿಲ್ಲ ಎಂದು ಚಾಟಿ ಬೀಸಿದೆ.

`ಆಕಾಶ್' ಟ್ಯಾಬ್ಲೆಟ್‌ನಲ್ಲೂ ಲೋಪ
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಅಗ್ಗದ ಬೆಲೆಯ `ಆಕಾಶ್' ಟ್ಯಾಬ್ಲೆಟ್ ಯೋಜನೆಯಲ್ಲಿ ಲೋಪಗಳ ಬಗ್ಗೆಯೂ ಸಿಎಜಿ, ಮಾನವ ಸಂಪನ್ಮೂಲ ಸಚಿವಾಲಯವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಯಾವುದೇ ಪೂರ್ವಾಪರ ಆಲೋಚನೆ ಮಾಡದೆ  `ಆಕಾಶ್' ಟ್ಯಾಬ್ಲೆಟ್ ಯೋಜನೆ ಅನುಷ್ಠಾನ ಹೊಣೆಯನ್ನು ರಾಜಸ್ತಾನದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಗೆ ವಹಿಸಿದ ಮಾನವ ಸಂಪನ್ಮೂಲ ಸಂಸ್ಥೆಯ ಏಕಪಕ್ಷೀಯ ನಿರ್ಧಾರವನ್ನು ಸಂಸತ್‌ನಲ್ಲಿ ಶುಕ್ರವಾರ ಚರ್ಚೆಗೆ ಬಂದ ಸಿಎಜಿ ವರದಿಯಲ್ಲಿ ಪ್ರಶ್ನಿಸಲಾಗಿದೆ.

ಶೈಕ್ಷಣಿಕ ಉದ್ದೇಶಗಳಿಗಾಗಿ `ಆಕಾಶ್' ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ ಕೇವಲ 1,500 ರೂಪಾಯಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಟ್ಯಾಬ್ಲೆಟ್ ನೀಡುವ ಉದ್ದೇಶ ಹೊಂದಿತ್ತು.  ಕಾನ್ಪುರ, ಖರಗ್‌ಪುರ, ಮದ್ರಾಸ್, ಬಾಂಬೆ ಐಐಟಿ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಕಡೆಗಣಿಸಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಹಾಗೂ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜಸ್ತಾನ್ ಐಐಟಿಗೆ ಯಾಕೆ ಇಂಥ ಬೃಹತ್ ಯೋಜನೆಯನ್ನು ವಹಿಸಲಾಯಿತು ಎಂದು ಸಿಎಜಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.