ADVERTISEMENT

‘ಇಸ್ಲಾಮಿಕ್‌ ಭಯೋತ್ಪಾದನೆ’ ಕೋರ್ಸ್‌: ಜೆಎನ್‌ಯುಗೆ ನೋಟಿಸ್

ಪಿಟಿಐ
Published 22 ಮೇ 2018, 19:49 IST
Last Updated 22 ಮೇ 2018, 19:49 IST

ನವದೆಹಲಿ: ‘ಇಸ್ಲಾಮಿಕ್‌ ಭಯೋತ್ಪಾದನೆ’ ಕುರಿತ ಕೋರ್ಸ್‌ ಪ್ರಾರಂಭಿಸಲು ಉದ್ದೇಶಿಸಿರುವ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕುಲಸಚಿವರಿಗೆ ದೆಹಲಿ ಅಲ್ಪಸಂಖ್ಯಾತರ ಆಯೋಗ ನೋಟಿಸ್‌ ಜಾರಿ ಮಾಡಿದೆ.

ಕೋರ್ಸ್ ಪ್ರಾರಂಭಿಸಲು ಮುಂದಾಗಿರುವ ಕಾರಣ ತಿಳಿಸುವಂತೆ ಸೂಚಿಸಿದೆ.

ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿರುವ ಆಯೋಗದ ಅಧ್ಯಕ್ಷ ಜಫರುಲ್‌ ಇಸ್ಲಾಂ ಖಾನ್‌, ಯಾವ ಆಧಾರದ ಮೇಲೆ ಇಂತಹ ಕೋರ್ಸ್‌ ಪ್ರಾರಂಭಿಸಲು ಜೆಎನ್‌ಯು ಯೋಚಿಸಿದೆ ಎಂಬುದರ ಬಗ್ಗೆ ಕುಲಸಚಿವರು ವಿವರಣೆ ನೀಡಬೇಕು ಎಂದು ಕೇಳಿದ್ದಾರೆ.

ADVERTISEMENT

‘ಕೋರ್ಸ್‌ನ ಪಠ್ಯಕ್ರಮವೇನು? ಆಧಾರ ಗ್ರಂಥಗಳು ಯಾವುವು? ವಿಷಯ ಬೋಧಿಸುವ ತಜ್ಞರು ಯಾರು? ವಿಷಯದಡಿ ಕೈಗೊಳ್ಳುವ ಸಂಶೋಧನಾ ಸ್ವರೂಪದ ಬಗ್ಗೆಯೂ ಮಾಹಿತಿ ನೀಡಿ’ ಎಂದು ಕೇಳಿರುವ ಆಯೋಗ, ಜೂನ್‌ 5ರೊಳಗೆ ಉತ್ತರಿಸುವಂತೆ ಸೂಚಿಸಿದೆ.

‘ಜೆಎನ್‌ಯು ಶೈಕ್ಷಣಿಕ ಮಂಡಳಿ ರಾಷ್ಟ್ರೀಯ ಭದ್ರತಾ ಅಧ್ಯಯನ ಕೇಂದ್ರ ನಿರ್ಮಿಸಲು ಉದ್ದೇಶಿಸಿದ್ದು, ಈ ಕೇಂದ್ರದಡಿ ‘ಇಸ್ಲಾಮಿಕ್‌ ಭಯೋತ್ಪಾದನೆ’ ಕುರಿತ ಕೋರ್ಸ್‌ ಪ್ರಾರಂಭಿಸಲು ನಿರ್ಣಯ ಅಂಗೀಕರಿಸಲಾಗಿದೆ’ ಎಂದು ಕಳೆದ ವಾರ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಉಪನ್ಯಾಸಕರೊಬ್ಬರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.