ADVERTISEMENT

ಉಗ್ರರಿಗೆ ಬೆಂಬಲ: ಪ್ರಧಾನಿ ಕಿಡಿ

ಪಿಟಿಐ
Published 2 ಜೂನ್ 2017, 19:30 IST
Last Updated 2 ಜೂನ್ 2017, 19:30 IST
ಸಭೆಗೂ ಮೊದಲು ಕಾನ್‌ಸ್ಟೆಂಟೇನಿಯಲ್‌ ಅರಮನೆ ಸಮೀಪ ಕೈ ಕೈ ಹಿಡಿದುಕೊಂಡು ಬಂದ ಮೋದಿ ಹಾಗೂ ಪುಟಿನ್‌ –ರಾಯಿಟರ್ಸ್‌ ಚಿತ್ರ
ಸಭೆಗೂ ಮೊದಲು ಕಾನ್‌ಸ್ಟೆಂಟೇನಿಯಲ್‌ ಅರಮನೆ ಸಮೀಪ ಕೈ ಕೈ ಹಿಡಿದುಕೊಂಡು ಬಂದ ಮೋದಿ ಹಾಗೂ ಪುಟಿನ್‌ –ರಾಯಿಟರ್ಸ್‌ ಚಿತ್ರ   

ಸೇಂಟ್‌ಪೀಟರ್ಸ್‌ಬರ್ಗ್‌ : ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಉಗ್ರರಿಗೆ ಹಣಕಾಸಿನ ನೆರವು, ಶಸ್ತ್ರಾಸ್ತ್ರ ಮತ್ತು ಸಂಪರ್ಕ ಸಾಧನಗಳು ಪೂರೈಕೆಯಾಗುವುದನ್ನು ಸಂಪೂರ್ಣ ವಾಗಿ ತಡೆಯಬೇಕು’ ಎಂದು ಹೇಳಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಅಂತರ ರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
‘ಶಸ್ತ್ರಾಸ್ತ್ರಗಳನ್ನು ಉಗ್ರರು ತಯಾರಿಸುವುದಿಲ್ಲ. ಆದರೆ, ಕೆಲವು ದೇಶಗಳು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತವೆ. ಇದೇ ರೀತಿ ಹಣವನ್ನು ಮುದ್ರಿಸುವುದಿಲ್ಲ. ಆದರೆ, ಕೆಲವು ದೇಶಗಳು ಅಕ್ರಮವಾಗಿ ಉಗ್ರರಿಗೆ ಹಣ ಸಾಗಿಸುತ್ತವೆ ಹಾಗೂ ದೂರಸಂಪರ್ಕ ಮತ್ತು ಸಾಮಾಜಿಕ ಜಾಲತಾಣಗಳ ಸಂಪರ್ಕಕ್ಕೆ ನೆರವು ನೀಡುತ್ತವೆ’ ಎಂದು ಹೇಳಿದರು.
‘ಭಾರತ ಕಳೆದ 40 ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆ ಸಮ ಸ್ಯೆಗೆ ಸಿಲುಕಿದೆ. ಸಾವಿರಾರು ಅಮಾಯಕ ನಾಗರಿಕರು ಮೃತಪಟ್ಟಿದ್ದಾರೆ. ಆದರೆ, ಜಗತ್ತು ಭಯೋತ್ಪಾದನೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದೇ ಪರಿಗಣಿಸಿತ್ತು. 2011ರ ಸೆಪ್ಟೆಂಬರ್‌ನಲ್ಲಿ ಭಯೋತ್ಪಾದಕರು ನ್ಯೂಯಾರ್ಕ್‌ನಲ್ಲಿ ನಡೆಸಿದ ದಾಳಿ ಬಳಿಕವೇ ಜಗತ್ತು ಎಚ್ಚೆತ್ತುಕೊಂಡಿತು’ ಎಂದರು. ‘ಭಯೋತ್ಪಾದನೆ ಮಾನ ವೀ ಯತೆಯ ಶತ್ರುವಾಗಿದೆ. ಅದಕ್ಕೆ ಗಡಿ ಇಲ್ಲ. ಹೀಗಾಗಿ ಒಗ್ಗಟ್ಟಿನಿಂದ ಎಲ್ಲ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಹೋರಾ ಡಬೇಕು’ ಎಂದು ಹೇಳಿದರು.

ಮೋದಿ ಪ್ರಶ್ನಿಸಿ ಟೀಕೆಗೆ ಗುರಿಯಾದ ಎನ್‌ಬಿಸಿ ವರದಿಗಾರ್ತಿ

ಸೇಂಟ್‌ ಪೀಟರ್ಸ್‌ಬರ್ಗ್‌: ‘ನೀವು ಟ್ವಿಟರ್‌ನಲ್ಲಿ ಇದ್ದೀರಾ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ ಅಮೆರಿಕದ ಎನ್‌ಬಿಸಿ ಸುದ್ದಿ ವಾಹಿನಿಯ ವರದಿಗಾರ್ತಿ ಮೆಗ್ಗಿನ್‌ ಕೆಲ್ಲಿ ಅವರು ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ADVERTISEMENT

ವಿಶ್ವದಲ್ಲಿ ರಾಜಕಾರಣಿಗಳ ಪೈಕಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಟ್ವಿಟರ್‌ನಲ್ಲಿ ಅತಿಹೆಚ್ಚು ಹಿಂಬಾಲಕರಿದ್ದಾರೆ. 3 ಕೋಟಿ ಹಿಂಬಾಲಕರನ್ನು ಹೊಂದಿರುವ ಮೋದಿ ಆ ನಂತರದ ಸ್ಥಾನದಲ್ಲಿ ಇದ್ದಾರೆ.

ಎನ್‌ಬಿಸಿ ಪ್ರಚಾರ ಕಾರ್ಯ ಕ್ರಮಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಸಂದರ್ಶನ ಮಾಡಲು ಕೆಲ್ಲಿ ತೆರಳಿದ್ದರು. ಇಬ್ಬರು ನಾಯಕರಿಗೆ ಕೆಲ್ಲಿ ಹಸ್ತಲಾಘವ ಮಾಡಿದರು.  ಈ ವೇಳೆ ‘ನೀವು ಕೊಡೆ ಹಿಡಿದು ಟ್ವಿಟರ್‌ನಲ್ಲಿ ಹಾಕಿರುವ ಛಾಯಾಚಿತ್ರ ಸೊಗಸಾಗಿದೆ’ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ಕೆಲ್ಲಿ, ‘ಓಹೋ ಹೌದಾ. ನೀವು ಟ್ವಿಟರ್‌ನಲ್ಲಿ ಇದ್ದೀರಾ’ ಎಂದು ಉದ್ಗರಿಸಿದರು. ‘ಹೌದು ನಾನು ಟ್ವಿಟರ್‌ನಲ್ಲಿದ್ದೇನೆ’ ಎಂದು ಮೋದಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.