ADVERTISEMENT

ಉಗ್ರರ ಬಂದೂಕಿನಲ್ಲಿ ಕವಚ ಭೇದಕ ಗುಂಡು

ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳಿಗೆ ಕಳವಳ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 19:30 IST
Last Updated 17 ಜೂನ್ 2018, 19:30 IST
ಉಕ್ಕಿನ ತಿರುಳು ಇರುವ ಗುಂಡು
ಉಕ್ಕಿನ ತಿರುಳು ಇರುವ ಗುಂಡು   

ಶ್ರೀನಗರ: ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಉಗ್ರರ ಗುಂಪುಗಳ ಶಸ್ತ್ರಾಸ್ತ್ರಕ್ಕೆ ಉಕ್ಕಿನ ತಿರುಳು ಇರುವ ಗುಂಡುಗಳು (ಬುಲೆಟ್‌) ಸೇರ್ಪಡೆಯಾಗಿವೆ ಎಂಬ ಆತಂಕಕಾರಿ ಅಂಶ ತಿಳಿದು ಬಂದಿದೆ.

ಪಾಕಿಸ್ತಾನ ಮೂಲದ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯು ಇಂತಹ ಗುಂಡುಗಳನ್ನು ಹೊಂದಿದೆ. ಇವು ಗುಂಡು ನಿರೋಧಕ ಬಂಕರ್‌ಗಳನ್ನು ಸೀಳಿ ಸಾಗಬಲ್ಲ ಸಾಮರ್ಥ್ಯ ಹೊಂದಿವೆ. ಭಯೋತ್ಪಾದನೆ ತಡೆ ಕಾರ್ಯಾಚರಣೆಯಲ್ಲಿ ಯೋಧರು ಬಳಸುವ ಗುಂಡು ನಿರೋಧಕ ಕವಚಗಳನ್ನು ಇವು ಭೇದಿಸುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷದ ಕೊನೆಯ ದಿನ ಇಂತಹ ಗುಂಡು ಮೊದಲ ಬಾರಿಗೆ ಪತ್ತೆಯಾಗಿತ್ತು. ದಕ್ಷಿಣ ಕಾಶ್ಮೀರದ ಲೆಥ್‌ಪೋರಾದ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಶಿಬಿರದ ಮೇಲೆ ಜೈಷ್‌–ಎ–ಮೊಹಮ್ಮದ್‌ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದರು.

ADVERTISEMENT

ಸಿಆರ್‌ಪಿಎಫ್‌ನ ಐವರು ಸಿಬ್ಬಂದಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು. ಗುಂಡು ನಿರೋಧಕ ಕವಚ ಹೊಂದಿದ್ದ ಒಬ್ಬರಿಗೂ ಗುಂಡು ತಗಲಿತ್ತು.

ಸಮಗ್ರ ತನಿಖೆಯ ಬಳಿಕ ಇದು ಎ.ಕೆ. ಸರಣಿಯ ಬಂದೂಕಿನಿಂದ ಹಾರಿಸಿದ ಗಡಸು ಉಕ್ಕಿನ ತಿರುಳು ಇರುವ ಗುಂಡು ಎಂಬುದು ದೃಢಪಟ್ಟಿತು.

ಕವಚ ಭೇದಕ ಎಂದೇ ಕರೆಯಲಾಗುವ ಈ ಗುಂಡನ್ನು ಗಡಸುಗೊಳಿಸಲಾದ ಉಕ್ಕು ಅಥವಾ ಟಂಗ್‌ಸ್ಟನ್‌ ಕಾರ್ಬೈಡ್‌ನಿಂದ ತಯಾರಿಸಲಾಗುತ್ತದೆ.

2017ರ ಡಿಸೆಂಬರ್‌ 31ರ ದಾಳಿಯ ಬಳಿಕ, ಅದಕ್ಕೂ ಹಿಂದಿನ ಆತ್ಮಹತ್ಯಾ ದಾಳಿಗಳನ್ನು ವಿವರವಾದ ಪರಿಶೀಲನೆಗೆ ಒಳಪಡಿಸಲಾಯಿತು.

ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಪೊಲೀಸ್‌ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಎಂಟು ಯೋಧರು ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ಉಗ್ರರು ಉಕ್ಕಿನ ತಿರುಳು ಹೊಂದಿದ್ದ ಗುಂಡುಗಳನ್ನು ಬಳಸಿದ್ದರು.

ಸಾಮಾನ್ಯ ಗುಂಡು ಹೇಗಿರುತ್ತದೆ ?

ಸಾಮಾನ್ಯವಾಗಿ ಎ.ಕೆ. ಸರಣಿಯ ಬಂದೂಕುಗಳಲ್ಲಿ ಬಳಸುವ ಗುಂಡಿನ ತಿರುಳನ್ನು ಸೀಸದಿಂದ ತಯಾರಿಸಲಾಗುತ್ತದೆ. ಅದರ ಕವಚಕ್ಕೆ ಮೆದು ಉಕ್ಕನ್ನು ಬಳಸಲಾಗುತ್ತದೆ. ಇದು ಗುಂಡು ನಿರೋಧಕ ಕವಚವನ್ನು ಸೀಳುವ ಸಾಮರ್ಥ್ಯ ಹೊಂದಿಲ್ಲ.

ಚೀನಾದ ನೆರವು: ಗಡಸು ಉಕ್ಕಿನ ತಿರುಳು ಇರುವ ಗುಂಡುಗಳನ್ನು ತಯಾರಿಸಲು ಚೀನಾ ತಂತ್ರಜ್ಞಾನದ ನೆರವು ಪಡೆದುಕೊಳ್ಳಲಾಗಿದೆ.

ಉಗ್ರರ ಅಡಗುದಾಣಗಳಿಂದ ವಶಪಡಿಸಿಕೊಳ್ಳಲಾದ ಗುಂಡುಗಳಲ್ಲಿ ಉಕ್ಕಿನ ತಿರುಳು ಹೊಂದಿದ್ದ ಗುಂಡುಗಳೂ ಸೇರಿವೆ.

* ಗುಂಡು ನಿರೋಧಕ ಕವಚ ಹೊಂದಿರುವ ಯೋಧರು ಉಗ್ರರ ಜತೆಗೆ ನೇರ ಮುಖಾಮುಖಿ ಆಗುವುದನ್ನು ತಪ್ಪಿಸಲು ಸೂಚಿಸಲಾಗಿದೆ

–ಭದ್ರತಾ ಪಡೆಯ ಅಧಿಕಾರಿ 

ಮುಖ್ಯಾಂಶಗಳು

* 2017ರ ಡಿಸೆಂಬರ್‌ 31ರಂದು ನಡೆದ ದಾಳಿಯಲ್ಲಿ ಉಕ್ಕಿನ ತಿರುಳಿನ ಗುಂಡು ಪತ್ತೆ

* ಜೈಷ್‌–ಎ–ಮೊಹಮ್ಮದ್‌ ಉಗ್ರರಲ್ಲಿ ಇಂತಹ ಗುಂಡುಗಳಿವೆ

* ಎ.ಕೆ. ಸರಣಿಯ ಬಂದೂಕುಗಳಲ್ಲಿ ಇಂತಹ ಗುಂಡುಗಳ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.