ADVERTISEMENT

ಉಗ್ರರ ಸಂಚು ವಿಫಲ: ನಾಲ್ವರ ಹತ್ಯೆ

ಪಿಟಿಐ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಉಗ್ರರ ಸಂಚು ವಿಫಲ: ನಾಲ್ವರ ಹತ್ಯೆ
ಉಗ್ರರ ಸಂಚು ವಿಫಲ: ನಾಲ್ವರ ಹತ್ಯೆ   

ಶ್ರೀನಗರ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಶಿಬಿರಕ್ಕೆ ನುಗ್ಗಿ ದೀರ್ಘ ಕಾಲ ಅಲ್ಲಿದ್ದು ಭಾರಿ ಅನಾಹುತ ಉಂಟು ಮಾಡುವ ಉದ್ದೇಶ ಹೊಂದಿದ್ದ ನಾಲ್ವರು ಉಗ್ರರನ್ನು ಸೋಮವಾರ ಬೆಳಿಗ್ಗೆ ಬಂಡಿಪೊರಾ ಜಿಲ್ಲೆಯ ಸುಂಬಲ್‌ದಲ್ಲಿ ಹತ್ಯೆ ಮಾಡಲಾಗಿದೆ. ಶಿಬಿರದೊಳಗೆ ಸಾಕಷ್ಟು ಹಾನಿ ಮಾಡಿ ನಂತರ ತಮ್ಮನ್ನು ಸ್ಫೋಟಿಸಿಕೊಳ್ಳುವ ಸಂಚನ್ನು ಉಗ್ರರು ಹೊಂದಿದ್ದರು.

ಉಗ್ರರು ಬೆಳಿಗ್ಗೆ 4.30ರ ಸುಮಾರಿಗೆ ಕಾವಲುಗಾರರ  ಮೇಲೆ ಗುಂಡು ಹಾರಿಸಿ ಶಿಬಿರದ ಒಳಗೆ ನುಗ್ಗಲು ಯತ್ನಿಸಿದರು.

ಆದರೆ ಸಿಆರ್‌ಪಿಎಫ್‌ ಯೋಧರು ತಕ್ಷಣ ಪ್ರತಿದಾಳಿ ನಡೆಸಿ ಉಗ್ರರು ಒಳನುಗ್ಗದಂತೆ ತಡೆದರು. ದಾಳಿಯ  ಮಾಹಿತಿ ಸಿಕ್ಕಿದ ಕೂಡಲೇ ಸ್ಥಳೀಯ ಪೊಲೀಸರು ಧಾವಿಸಿ ಸಿಆರ್‌ಪಿಎಫ್‌ ಸಿಬ್ಬಂದಿಯ ಕಾರ್ಯಾಚರಣೆಗೆ ಬೆಂಬಲ ನೀಡಿದರು. ನಾಲ್ವರೂ ಉಗ್ರರನ್ನು ಸಿಆರ್‌ಪಿಎಫ್‌ ಯೋಧರು ಹೊಡೆದುರುಳಿಸಿದರು.

ADVERTISEMENT

ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಉಗ್ರರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಯೋಧರ ಮೇಲೆ25ಕ್ಕೂ ಹೆಚ್ಚು ಗ್ರೆನೇಡ್‌ಗಳನ್ನು ಎಸೆದಿದ್ದಾರೆ. ಉಗ್ರರ ಬಳಿ ಸಾಕಷ್ಟುಒಣ ಆಹಾರವೂ ದೊರೆತಿದೆ.

ಹಾಗಾಗಿ ಅವರು ಸಾಧ್ಯವಾದಷ್ಟು ಹೆಚ್ಚು ಕಾಲ ಶಿಬಿರದೊಳಗೆ ಇದ್ದು ಹಾನಿ ಉಂಟು ಮಾಡುವ ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಗ್ರರಿಂದ ನಾಲ್ಕು ಎ.ಕೆ.–47 ರೈಫಲ್‌ಗಳು ಮತ್ತು ಅಪಾರ ಕೈಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಸಿಆರ್‌ಪಿಎಫ್‌ ಯೋಧರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಸಾಧಾರಣ ಧೈರ್ಯ ಮತ್ತುಕೆಚ್ಚು ಪ್ರದರ್ಶಿಸಿದ್ದಾರೆ. ಕಟ್ಟೆಚ್ಚರ ವಹಿಸಿದ್ದ ಪೊಲೀಸರು ಮತ್ತು ಯೋಧರ ಜಂಟಿ ಕಾರ್ಯಾಚರಣೆಯಿಂದ ಯಶಸ್ಸು ದೊರೆತಿದೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಶ್ಲಾಘಿಸಿದ್ದಾರೆ.

* ಸಿಆರ್‌ಪಿಎಫ್‌ ಯೋಧರು ರಾತ್ರಿಯಿಡೀ ಎಚ್ಚರವಿದ್ದು ಬಿಗಿ ಭದ್ರತೆ ಒದಗಿಸಿದ್ದು ಮತ್ತು ಪೊಲೀಸರು ತ್ವರಿತ ನೆರವು ನೀಡಿದ್ದು ಸ್ಫೂರ್ತಿದಾಯಕ.

ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.