ADVERTISEMENT

ಉಗ್ರವಾದ ನಿಲ್ಲದೆ ಶಾಂತಿ ಮಾತುಕತೆ ಇಲ್ಲ: ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ

ಪಿಟಿಐ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಭಾರತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೊಂದಿರುವ ಪೆಟ್ಟಿಗೆಗಳನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಮಾಧ್ಯಮಗೋಷ್ಠಿಯಲ್ಲಿ ‍ಪ್ರದರ್ಶಿಸಿದರು. ವಿದೇಶಾಂಗ ಖಾತೆಯ ರಾಜ್ಯ ಸಚಿವರಾದ ವಿ.ಕೆ.ಸಿಂಗ್‌ (ಎಡ) ಮತ್ತು ಎಂ.ಜೆ. ಅಕ್ಬರ್‌ (ಬಲತುದಿ) ಜತೆಗಿದ್ದರು –‍ಪಿಟಿಐ ಚಿತ್ರ
ಭಾರತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೊಂದಿರುವ ಪೆಟ್ಟಿಗೆಗಳನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಮಾಧ್ಯಮಗೋಷ್ಠಿಯಲ್ಲಿ ‍ಪ್ರದರ್ಶಿಸಿದರು. ವಿದೇಶಾಂಗ ಖಾತೆಯ ರಾಜ್ಯ ಸಚಿವರಾದ ವಿ.ಕೆ.ಸಿಂಗ್‌ (ಎಡ) ಮತ್ತು ಎಂ.ಜೆ. ಅಕ್ಬರ್‌ (ಬಲತುದಿ) ಜತೆಗಿದ್ದರು –‍ಪಿಟಿಐ ಚಿತ್ರ   

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳನ್ನು ಮಟ್ಟಹಾಕುವವರೆಗೆ ಪಾಕಿಸ್ತಾನದ ಜತೆಗೆ ಸಮಗ್ರವಾದ ಮಾತುಕತೆ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ದೃಢವಾಗಿ ಹೇಳಿದ್ದಾರೆ.

ಗಡಿಯಲ್ಲಿ ಜನರು ಸಾಯುತ್ತಿರುವಾಗ ಮಾತುಕತೆ ನಡೆಸುವುದು ಸರಿಯಲ್ಲ ಎಂದು ಸುಷ್ಮಾ ಅಭಿಪ್ರಾಯಪಟ್ಟಿದ್ದಾರೆ.

‘ಪಾಕಿಸ್ತಾನದ ಜತೆ ಮಾತುಕತೆಗೆ ನಾವು ಸದಾ ಸಿದ್ಧ, ಆದರೆ ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಗದು ಎಂಬು ಷರತ್ತು ಇದೆ’ ಎಂದು ಕೇಂದ್ರದ ಎನ್‌ಡಿಎ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯನ್ನು ವಿವರಿಸಲು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. 

ADVERTISEMENT

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಪೂರ್ಣಗೊಂಡ ಬಳಿಕ ಮಾತುಕತೆ ನಡೆಯಲಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ಸಮಗ್ರ ಮಾತುಕತೆ ನಡೆಯದೇ ಇದ್ದರೂ ಭಯೋತ್ಪಾದನೆಗೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಮಾತುಕತೆ ನಡೆಯಲಿದೆ ಎಂದು ಅವರು ತಿಳಿಸಿದರು.

ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ 2018ರ ಗಿಲ್ಗಿಟ್‌-ಬಾಲ್ಟಿಸ್ತಾನ್‌ ಆದೇಶವನ್ನು ಪ್ರಸ್ತಾಪಿಸಿದ ಸುಷ್ಮಾ, ಪಾಕಿಸ್ತಾನವು ಇತಿಹಾಸವನ್ನು ತಿರುಚುತ್ತಿದೆ ಎಂದು ಅವರು ಆಪಾದಿಸಿದರು.

‘ನಮಗೆ ಇತಿಹಾಸ ಮತ್ತು ಭೂಗೋಳ ಕಲಿಸಲು ‍ಪಾಕಿಸ್ತಾನ ಯತ್ನಿಸುತ್ತಿದೆ. ಕಾನೂನಿನ ಆಡಳಿತದಲ್ಲಿ ನಂಬಿಕೆಯೇ ಇಲ್ಲದ ದೇಶ ಪಾಕಿಸ್ತಾನ. ಅಂತಹ ದೇಶದಿಂದ ನಾವು ಏನನ್ನು ಕಲಿಯುವುದಿದೆ’ ಎಂದು ಅವರು ಹೇಳಿದ್ದಾರೆ.

ಗಿಲ್ಗಿಟ್‌–ಬಾಲ್ಟಿಸ್ತಾನ ಆದೇಶ 2018ಕ್ಕೆ ಪಾಕಿಸ್ತಾನದ ಸಂಪುಟವು ಮೇ 21ರಂದು ಅನುಮೋದನೆ ನೀಡಿದೆ. ಆ ಪ್ರಾಂತ್ಯದ ವಿಧಾನಸಭೆ ಕೂಡ ಇದಕ್ಕೆ ಒಪ್ಪಿಗೆ ಕೊಟ್ಟಿದೆ. ಗಿಲ್ಗಿಟ್‌–ಬಾಲ್ಟಿಸ್ತಾನವು ವಿವಾದಿತ ಪ್ರದೇಶ. ಆದರೆ ಇದನ್ನು ತನ್ನ ಐದನೇ ಪ್ರಾಂತ್ಯವಾಗಿ ಸೇರಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.

ಭಾರತದಲ್ಲಿರುವ ಪಾಕಿಸ್ತಾನದ ಉಪ ಹೈಕಮಿಷನರ್‌ ಸಯ್ಯದ್‌ ಹೈದರ್‌ ಶಾ ಅವರನ್ನು ವಿದೇಶಾಂಗ ಸಚಿವಾಲಯವು ಭಾನುವಾರ ಕರೆಸಿಕೊಂಡು ಗಿಲ್ಗಿಟ್‌–ಬಾಲ್ಟಿಸ್ತಾನಕ್ಕೆ ಸಂಬಂಧಿಸಿ ತನ್ನ ಪ್ರತಿಭಟನೆ ದಾಖಲಿಸಿದೆ. ಬಲವಂತದಿಂದ ಈ ಪ್ರಾಂತ್ಯದ ಸ್ಥಿತಿಗತಿಯನ್ನು ಬದಲಿಸಲು ಯತ್ನಿಸಿದರೆ ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ಭಾರತ ಹೇಳಿದೆ.

ಟ್ವಿಟರ್‌ನಿಂದಾಗಿ ಜನಮುಖಿ

ನಾಲ್ಕು ವರ್ಷಗಳಲ್ಲಿ ತಮ್ಮ ಟ್ವೀಟ್‌ಗಳಿಂದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದಂತಗೋಪುರದಿಂದ ಕೆಳಗಿಳಿದು ಜನರ ಬಳಿಗೆ ತಲುಪಿದೆ ಎಂದು ಸುಷ್ಮಾ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ವಿದೇಶಾಂಗ ವ್ಯವಹಾರ ಸಚಿವಾಲಯವು ಒಂದು ಟ್ವಿಟರ್‌ ಖಾತೆಗೆ ಸೀಮಿತವಾಗಿದೆ ಎಂಬ ಕಾಂಗ್ರೆಸ್‌ ಟೀಕೆಗೆ ಸುಷ್ಮಾ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿದೇಶ ಪ್ರವಾಸದ ಸಂದರ್ಭದಲ್ಲಿ ತೊಂದರೆಗೆ ತುತ್ತಾದ ಭಾರತೀಯರಿಗೆ ನೆರವಾಗಲು ಟ್ವಿಟರ್‌ ಅನ್ನು ಸುಷ್ಮಾ ಅವರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಭಾರತದಲ್ಲಿ ಚಿಕಿತ್ಸೆ ಪಡೆಯಲು ವೀಸಾ ದೊರಕಿಸುವಂತೆ ಕೋರಿ ಪಾಕಿಸ್ತಾನದ ಹಲವು ಮಂದಿ ಸುಷ್ಮಾ ಅವರಿಗೆ ಟ್ವೀಟ್‌ ಮಾಡಿದ್ದಿದೆ. ನೆರವು ಕೋರಿದ ಜನರಿಗೆ ಸಹಾಯ ಮಾಡುವಂತೆ ಸುಷ್ಮಾ ಅವರು ಟ್ವಿಟರ್‌ ಮೂಲಕವೇ ವಿದೇಶಾಂಗ ಸಚಿವಾಲಯದ ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದಾರೆ.

‘ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದು, ಅವರ ಕಷ್ಟಗಳನ್ನು ಪರಿಹರಿಸುವುದು ವಿದೇಶಾಂಗ ಸಚಿವಾಲಯದ ಆದ್ಯತೆಯ ಕೆಲಸವಾಗಿದೆ.’

– ಸುಷ್ಮಾ ಸ್ವರಾಜ್‌, ವಿದೇಶಾಂಗ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.