ADVERTISEMENT

ಉಡುಗೊರೆಗೆ ನಿರ್ಬಂಧ

ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 10:29 IST
Last Updated 6 ಜುಲೈ 2013, 10:29 IST

ನವದೆಹಲಿ (ಪಿಟಿಐ): ಮತದಾರರನ್ನು ಸೆಳೆಯುವ ಉದ್ದೇಶದಿಂದ ರಾಜಕೀಯ ಪಕ್ಷಗಳು  ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಕೊಡುಗೆಗಳ ಆಮಿಷ ಒಡ್ಡುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮತದಾರರಿಗೆ ಉಡುಗೊರೆಗಳ ಆಮಿಷ ಒಡ್ಡುವುದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಚುನಾವಣಾ ಪ್ರಣಾಳಿಕೆಗಳಲ್ಲಿ ರಾಜಕೀಯ ಪಕ್ಷಗಳು ಮತದಾರರ ಓಲೈಕೆಗೆ ಪ್ರಕಟಿಸುವ ವಿಚಾರಗಳಿಗೆ, ಆಮಿಷಗಳಿಗೆ ಕಡಿವಾಣ ಹಾಕಲು ಸ್ಪಷ್ಟ ಮಾರ್ಗದರ್ಶಿ ಸೂತ್ರ ರೂಪಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಸದ್ಯಕ್ಕೆ ಜಾರಿಯಲ್ಲಿರುವ ಕಾನೂನಿನ ಪ್ರಕಾರ, ಮತದಾರರಿಗೆ ಉಚಿತ ಕೊಡುಗೆಗಳ ಆಮಿಷ ಒಡ್ಡುವುದು ಭ್ರಷ್ಟ ನಡೆ ಅನಿಸಿಕೊಳ್ಳುವುದಿಲ್ಲ. ಆದರೆ, ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಮಾದರಿ ನೀತಿ ಸಂಹಿತೆ ಅಡಿ ತರಬಹುದಾಗಿದೆ ಎಂದು ಕೋರ್ಟ್ ಹೇಳಿದೆ.

ಜನ ಪ್ರತಿನಿಧಿ ಕಾಯ್ದೆಯ 123ನೇ ಸೆಕ್ಷನ್ ಅನ್ವಯ, ಉಚಿತ ಕೊಡುಗೆ ನೀಡುವ ಭರವಸೆ ಭ್ರಷ್ಟ ನಡೆ ಅನಿಸಿಕೊಳ್ಳುವುದಿಲ್ಲ. ಆದರೆ, ಉಚಿತ ಕೊಡುಗೆಗಳು ಜನರ ಮೇಲೆ ಅಪಾರ ಪ್ರಭಾವ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯ ಬುಡವನ್ನೇ ಇದು ಅಲ್ಲಾಡಿಸುತ್ತದೆ ಎಂದು ನ್ಯಾಯಮೂರ್ತಿ ಪಿ. ಸದಾಶಿವಂ ಹಾಗೂ ರಂಜನ್ ಗೋಗೊಯ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

`ಚುನಾವಣಾ ಪ್ರಣಾಳಿಕೆಗಳಲ್ಲಿ ಇರುವ ವಿಷಯಗಳನ್ನು ನಿಯಂತ್ರಿಸಲು ಯಾವುದೇ ನಿರ್ದಿಷ್ಟ ಕಾನೂನು ಇಲ್ಲದ ಕಾರಣ ಮಾರ್ಗದರ್ಶಿಯೊಂದನ್ನು ರೂಪಿಸುವಂತೆ ನಾವು ಈ ಮೂಲಕ ಚುನಾವಣಾ ಆಯೋಗಕ್ಕೆ ಸೂಚಿಸುತ್ತೇವೆ' ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ಜತೆ ಚರ್ಚಿಸಿ ಆಯೋಗ ಈ ಹೆಜ್ಜೆ ಇಡಬೇಕು. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಮಾದರಿ ನೀತಿ ಸಂಹಿತೆಯಲ್ಲಿ ಚುನಾವಣಾ ಪ್ರಣಾಳಿಕೆಗಾಗಿಯೇ ಪ್ರತ್ಯೇಕ ಮಾರ್ಗದರ್ಶಿಯನ್ನು ಅಡಕಗೊಳಿಸಬಹುದು ಎಂದೂ ನ್ಯಾಯಪೀಠ ತಿಳಿಸಿದೆ.

ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಆಯೋಗ ಈ ನಿಟ್ಟಿನಲ್ಲಿ ಏನೂ ಮಾಡಲಾಗದು ಎಂಬುದು ನಮಗೂ ಗೊತ್ತು. ಆದರೆ, ಪ್ರಣಾಳಿಕೆಗಳಿಗೂ ಚುನಾವಣಾ ಪ್ರಕ್ರಿಯೆಗೂ ನೇರ ಸಂಬಂಧ ಇರುವುದರಿಂದ ಆಯೋಗ ಈ ಕುರಿತು ಕ್ರಮ ಕೈಗೊಳ್ಳಬಹುದು ಎಂದು ಕೋರ್ಟ್ ಹೇಳಿದೆ.

ಚುನಾವಣಾ ಆಯೋಗ ಮಂಡಿಸಿದ್ದ ವಾದ ಒಪ್ಪಿಕೊಂಡಿರುವ ನ್ಯಾಯಪೀಠವು, ಉಚಿತ ಕೊಡುಗೆಗಳಿಂದ ಅಭ್ಯರ್ಥಿಗಳ ನಡುವಿನ ಸ್ಪರ್ಧೆ ಸಮನಾಗಿರುವುದಿಲ್ಲ. ಇದು ಚುನಾವಣಾ ಪ್ರಕ್ರಿಯೆಯನ್ನೇ ಕುಲಗೆಡಿಸುತ್ತದೆ. ಸಂಸತ್ತು ಈ ನಿಟ್ಟಿನಲ್ಲಿ ಪ್ರತ್ಯೇಕ ಶಾಸನ ರೂಪಿಸುವ ಅಗತ್ಯವಿದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಎಐಎಡಿಎಂಕೆ ಮತದಾರರಿಗೆ ಭರವಸೆ ನೀಡಿದ್ದಂತೆ ಜಯಲಲಿತಾ ಸರ್ಕಾರವು ಗೃಹಬಳಕೆ ವಸ್ತುಗಳನ್ನು ಉಚಿತವಾಗಿ ನೀಡಲು ಮುಂದಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.

`ರಾಜ್ಯ ಸರ್ಕಾರ ಅಸಂವಿಧಾನಾತ್ಮಕವಾಗಿ ಉಚಿತ ಕೊಡುಗೆಗಳನ್ನು ನೀಡುತ್ತಿರುವುದರಿಂದ ಬೊಕ್ಕಸಕ್ಕೆ ಭಾರಿ ಹೊರೆ ಬೀಳುತ್ತಿದೆ. ಆದ್ದರಿಂದ ಇದನ್ನು ತಡೆಯಬೇಕು' ಎಂದು ಕೋರಿ ತಮಿಳುನಾಡಿನ ವಕೀಲ ಎಸ್. ಸುಬ್ರಮಣಿಯಮ್ ಬಾಲಾಜಿ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಸುಪ್ರೀಂ ತೀರ್ಪಿನ ಪರಿಣಾಮ
ಸುಪ್ರೀಂಕೋರ್ಟ್‌ನ ಈ ತೀರ್ಪು ಚುನಾವಣಾ ರಾಜಕೀಯದ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಲ್ಯಾಪ್‌ಟಾಪ್, ಟಿ.ವಿ, ಗ್ರೈಂಡರ್ ಮತ್ತು ಮಿಕ್ಸರ್, ಫ್ಯಾನ್, ಚಿನ್ನ, ಉಚಿತ ಆಹಾರ ಧಾನ್ಯ ಇತ್ಯಾದಿ ಆಮಿಷ ಒಡ್ಡುವುದಕ್ಕೆ ಇದು ಕಡಿವಾಣ ಹಾಕುವ ಸಾಧ್ಯತೆಯಿದೆ. ಅಲ್ಲದೇ ಚುನಾವಣಾ ಪ್ರಣಾಳಿಕೆಗಳನ್ನು ಚುನಾವಣಾ ಆಯೋಗ ಪರಿಶೀಲಿಸಬಹುದಾಗಿದೆ.

ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಪ್ರಣಾಳಿಕೆ  ಬಿಡುಗಡೆ ಮಾಡಿದ್ದರೂ ಚುನಾವಣಾ ಆಯೋಗ ಅದಕ್ಕೂ ನೀತಿ ಸಂಹಿತೆ  ಅನ್ವಯಿಸಬಹುದಾಗಿದೆ ಎಂದು ಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.