ಡೆಹ್ರಾಡೂನ್ (ಐಎಎನ್‌ಎಸ್): ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗಿರುವ ದೀಢಿರ್ ಪ್ರವಾಹ ಹಾಗೂ ಭೂಕುಸಿತದ ಪರಿಣಾಮ ಉತ್ತರಖಾಂಡ್‌ದಲ್ಲಿ ಶನಿವಾರ ಆರು ಜನರು ಮೃತಪಟ್ಟಿದ್ದು, `ಚಾರ್‌ಧಾಮ್~ ಯಾತ್ರೆಗಾಗಿ ಆಗಮಿಸಿರುವ ಸಾವಿರಾರು ಭಕ್ತರು ತೊಂದರೆಗೆ ಸಿಲುಕಿ, ಕೆಲ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಿಮಾಲಯದ ಕೆಳ ರಾಜ್ಯಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯ ಪರಿಣಾಮ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದ್ದು, ಗಂಗೋತ್ರಿ, ಯಮನೋತ್ರಿ, ಬದರಿನಾಥ್ ಹಾಗೂ ಕೇದಾರನಾಥ್ ಕ್ಷೇತ್ರಗಳಿಗೆ ತೆರಳುವ ಮಾರ್ಗಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದ ಈ ನಾಲ್ಕು ಕ್ಷೇತ್ರಗಳಿಗೆ ಭೇಟಿನೀಡಲು ಆಗಮಿಸಿರುವ ಸಾವಿರಾರು ಭಕ್ತರು ದಾರಿ ಮಧ್ಯೆ ತೊಂದರೆಗೆ ಸಿಲುಕಿದ್ದಾರೆ.
ಗಂಗೋತ್ರಿಯ ಸಮೀಪದ ಭಾಗಿರಥಿ ನದಿ ತುಂಬಿ ಹರಿಯುತ್ತಿರುವ ಪರಿಣಾಮ 40ಕ್ಕೂ ಅಧಿಕ ಮನೆಗಳು ಸೇರಿದಂತೆ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದ್ದು, ಈ ಪ್ರವಾಹದಲ್ಲಿ ಮೂವರು ಅಗ್ನಿಶಾಮಕ ದಳ ಸಿಬ್ಬಂದಿ ಮೃತಪಟ್ಟಿದ್ದಾರೆ.
ಚಮೋಲಿಯಲ್ಲಿ ಮಳೆಯಿಂದಾಗಿ ಮನೆಯೊಂದು ಕುಸಿದ ಪರಿಣಾಮ ಎರಡು ಮಕ್ಕಳು ಮೃತಪಟ್ಟರೆ, ಪೊಕ್ರಿಯಲ್ಲಿ ಮಗುವೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹವಾಮಾನ ಇಲಾಖೆ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಪರಿಸ್ಥಿತಿ ಕುರಿತು ಎಚ್ಚರಿಕೆ ನೀಡಿದ ಪರಿಣಾಮ ಸರ್ಕಾರ ರಾಜ್ಯದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದು, ಮುಖ್ಯಮಂತ್ರಿ ವಿಜಯ್ ಬಹುಗುಣ್ ಅವರು ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.