ADVERTISEMENT

ಉತ್ತರ ಪ್ರದೇಶ: ಮಳೆಗೆ 28 ಬಲಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಲಖನೌ (ಪಿಟಿಐ): ಧಾರಾಕಾರ ಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ ಇದುವರೆಗೆ 28 ಜನರು ಮೃತಪಟ್ಟಿದ್ದಾರೆ. ರಾಜ್ಯದ 600 ಗ್ರಾಮಗಳು ನೆರೆಪೀಡಿತವಾಗಿದ್ದು, ಐದು ಲಕ್ಷಕ್ಕೂ ಅಧಿಕ ಜನರು ಭಾರಿ ಮಳೆಯಿಂದ ಬಾಧಿತರಾಗಿದ್ದಾರೆ.

ರಕ್ಷಣಾ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ   ನಿರತರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಹಣ ಬಿಡುಗಡೆ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.

ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಮುಜಾಫರ್‌ನಗರ, ಸಹನಾಪುರ ಜಿಲ್ಲೆ ಸೇರಿದಂತೆ 13 ಜಿಲ್ಲೆಗಳ ಸ್ಥಿತಿಗತಿಗಳ ಪರಿಶೀಲನೆ ನಡೆಸಿದ ಅಖಿಲೇಶ್ ಯಾದವ್ ಅವರು ಪರಿಹಾರಕಾರ್ಯಕ್ಕಾಗಿ ್ಙ 50 ಲಕ್ಷ ಬಿಡುಗಡೆ ಮಾಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮಧ್ಯೆ, ಶಾರದಾ ಮತ್ತು ಗಂಗಾ ನದಿಗಳು ಅಪಾಯದ ಮಟ್ಟಕ್ಕೆ ಸಮೀಪದಲ್ಲೇ ಹರಿಯುತ್ತಿವೆ.

ಉತ್ತರ ಪ್ರದೇಶ-ಹರಿಯಾಣ ಸಂಪರ್ಕ ಕಡಿತ: ಶಾಮ್ಲಿ ಜಿಲ್ಲೆಯ ಕೈರಾಣದಲ್ಲಿ ಯಮುನಾ ನದಿಯು ಸೇತುವೆಯ ಮೇಲೆ ಹರಿಯುತ್ತಿರುವುದರಿಂದ ಸತತ ನಾಲ್ಕನೇ ದಿನವೂ ಉತ್ತರ ಪ್ರದೇಶ ಮತ್ತು ಹರಿಯಾಣದ ನಡುವಿನ ಸಂಪರ್ಕ ಕಡಿತಗೊಂಡಿತ್ತು. ಮಳೆ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಪರಿಣಾಮವಾಗಿ ನಾಲ್ಕು ದಿನಗಳ ಹಿಂದೆ ಈ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಡಿಎನ್‌ಎ ಮಾದರಿ ಸಂಗ್ರಹಕ್ಕೆ ಸೂಚನೆ: ನದಿಗಳಲ್ಲಿ ಪತ್ತೆಯಾಗುವ ಅಪರಿಚಿತ ಶವಗಳ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿಡುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಶುಕ್ರವಾರ ಸೂಚಿಸಿದೆ.

`ಮೃತರ ಗುರುತನ್ನು ಪತ್ತೆ ಹಚ್ಚುವುದಕ್ಕಾಗಿ ಎಲ್ಲಾ ಶವಗಳ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ' ಎಂದು ಎಸ್‌ಟಿಎಫ್ ಐಜಿ ಆಶೀಷ್ ಗುಪ್ತಾ ತಿಳಿಸಿದ್ದಾರೆ.

ವಿಶೇಷ ರೈಲು: ಉತ್ತರಾಖಂಡ ಪ್ರವಾಹ ಪೀಡಿತರ ಪ್ರಯಾಣಕ್ಕಾಗಿ ಉತ್ತರವಲಯದ ರೈಲ್ವೆಯು ಹರಿದ್ವಾರದಿಂದ ದೆಹಲಿ, ಚಂಡೀಗಡ ಮತ್ತು ಲಖನೌಗೆ ಮೂರು ವಿಶೇಷ ರೈಲುಗಳನ್ನು ಆರಂಭಿಸಿದೆ.

ಆಂಧ್ರದಿಂದಲೂ ರೈಲು: ಉತ್ತರಾಖಂಡದಲ್ಲಿ ಸಿಲುಕಿರುವ ಆಂಧ್ರಪ್ರದೇಶದ ಜನರನ್ನು ಕರೆತರುವುದಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಶುಕ್ರವಾರ ರಾತ್ರಿ ಸಿಕಂದರಾಬಾದ್‌ನಿಂದ ದೆಹಲಿಗೆ ತೆರಳಲಿರುವ ವಿಶೇಷ ರೈಲು, ಉತ್ತರಾಖಂಡದಿಂದ ದೆಹಲಿಗೆ ಬಂದಿರುವ ರಾಜ್ಯದ ಜನರನ್ನು ಭಾನುವಾರ ಸಿಕಂದರಾಬಾದ್‌ಗೆ ಕರೆತರುವ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.